ಕರ್ನಾಟಕದಿಂದ ಸಿಂಗಾಪುರಕ್ಕೆ ಹೋಗಿ ನೆಲೆಸಿ ಅಲ್ಲಿ ಸುಮಾರು 76,000 ಗಿಡಗಳನ್ನು ನೆಟ್ಟು ಬೆಳೆಸಿ ವೃಕ್ಷಮಾತೆ ಎನಿಸಿಕೊಂಡಿದ್ದ ಕೀರ್ತಿದಾ ಮೆಕಾನಿ (66) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
- 76,000ಕ್ಕೂ ಅಧಿಕ ಗಿಡ ಬೆಳೆಸಿದ್ದ ಕನ್ನಡತಿ
ಸಿಂಗಾಪುರ: ಕರ್ನಾಟಕದಿಂದ ಸಿಂಗಾಪುರಕ್ಕೆ ಹೋಗಿ ನೆಲೆಸಿ ಅಲ್ಲಿ ಸುಮಾರು 76,000 ಗಿಡಗಳನ್ನು ನೆಟ್ಟು ಬೆಳೆಸಿ ವೃಕ್ಷಮಾತೆ ಎನಿಸಿಕೊಂಡಿದ್ದ ಕೀರ್ತಿದಾ ಮೆಕಾನಿ (66) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಕೀರ್ತಿದಾ ತಮ್ಮ ಕುಟುಂಬ ಹೊಂದಿದ್ದ ಕೃಷಿ ಭೂಮಿಯ ಕಾರಣ ಬಾಲ್ಯದಿಂದಲೇ ಪರಿಸರದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಮುಂದೆ 1990ರಲ್ಲಿ ತಮ್ಮ ಪತಿ ಭರತ್ ಮೆಕಾನಿ ಅವರೊಂದಿಗೆ ಸಿಂಗಾಪುರಕ್ಕೆ ಸ್ಥಳಾಂತರಗೊಂಡಿದ್ದರು. 1993ರಲ್ಲಿ ಸಿಂಗಾಪುರ ಪರಿಸರ ಮಂಡಳಿಯ ಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ವೇಳೆ ಕೀರ್ತಿದಾ ವೃಕ್ಷಗಳನ್ನು ಬೆಳೆಸುವ ಕಾಯಕಕ್ಕೆ ಮುಂದಾದರು.
ಅಂದಿನಿಂದ ಇದುವರೆಗೆ 3 ದಶಕಗಳ ಕಾಲ ತಮ್ಮನ್ನು ತಾವು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದ ಕೀರ್ತಿದಾ, 76,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಇವರ ಪರಿಸರ ಸಂರಕ್ಷಣೆ ಕಾಯಕಕ್ಕೆ 1 ಲಕ್ಷ ಕ್ಕೂ ಹೆಚ್ಚು ಜನರು ಕೂಡ ಕೈ ಜೋಡಿಸಿದ್ದರು. ಮೆಕಾನಿ, ಸಿಂಗಾಪುರ ಸರ್ಕಾರದಿಂದ ರಾಷ್ಟ್ರಪತಿಗಳ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳನ್ನೂ ಪಡೆದಿದ್ದಾರೆ.