ಕೋಲ್ಕತಾದ ಪ್ರಸಿದ್ಧ 150 ವರ್ಷಗಳ ಇತಿಹಾಸವನ್ನು ಹೊಂದಿರುವ ಟ್ರಾಂ ರೈಲಿನ ಸೇವೆ ಸ್ಥಗಿತ

| Published : Sep 30 2024, 01:26 AM IST / Updated: Sep 30 2024, 05:44 AM IST

ಸಾರಾಂಶ

150 ವರ್ಷಗಳ ಇತಿಹಾಸ ಹೊಂದಿರುವ ಕೋಲ್ಕತಾ ಟ್ರಾಂ ಸೇವೆಯನ್ನು ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದ್ದು, ಕೇವಲ ಒಂದು ಮಾರ್ಗದಲ್ಲಿ ಮಾತ್ರ ಸಂಚಾರ ಮುಂದುವರಿಯಲಿದೆ. 

ಕೋಲ್ಕತಾ: 150 ವರ್ಷಗಳ ಇತಿಹಾಸವನ್ನು ಹೊಂದಿರುವ ಟ್ರಾಂ ರೈಲಿನ ಕಾರ್ಯಾಚರಣೆ ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ಟ್ರಾಂ ವ್ಯವಸ್ಥೆಯು ಟ್ರಾಫಿಕ್‌ ಸಮಸ್ಯೆ ಇಮ್ಮಡಿಗೊಳಿಸುತ್ತಿದೆ. ಜೊತೆಗೆ ಇದು ನಿಧಾನ ಗತಿಯ ವ್ಯವಸ್ಥೆ ಇರುವ ಕಾರಣ ಜನರು ಹೆಚ್ಚು ವೇಗದ ಸಾರಿಗೆ ಬಯಸುತ್ತಾರೆ. ಹೀಗಾಗಿ ಕೇವಲ 1 ಮಾರ್ಗದಲ್ಲಿ ಬಿಟ್ಟು ಮಿಕ್ಕೆಲ್ಲಾ ಸೇವೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಬಂಗಾಳದ ಸಾರಿಗೆ ಸಚಿವ ಸ್ನೇಹಾಸಿಸ್‌ ಚಕ್ರಭೂರ್ತಿ ಹೇಳಿದ್ದಾರೆ.

1873ರಲ್ಲಿ ಬ್ರಿಟೀಷರಿಂದ ಶುರುವಾದ ಈ ಸಾರಿಗೆ ವ್ಯವಸ್ಥೆಯು ಮೊದಲಿಗೆ ಕುದುರೆಗಳ ಸಹಾಯದಿಂದ ಸಂಚರಿಸುತ್ತಿತ್ತು. ಬಳಿಕ ಆಧುನೀಕರಣದಿಂದ ಕುದುರೆ ಉಗಿಬಂಡಿಗಳು ಟ್ರಾಂ ಎಳೆಯಲು ಶುರುಮಾಡಿದವು. ನಂತರ 1900ರಲ್ಲಿ ಮೊದಲ ಬಾರಿಗೆ ವಿದ್ಯುತ್‌ ಶಕ್ತಿಯು ಟ್ರಾಂಗೆ ಬಲ ತುಂಬಿದವು. ಇದರ ನಂತರದಲ್ಲಿ ಏಸಿ ಬೋಗಿಗಳು ಸಹ ಬಂದು ಹೆಚ್ಚು ಜನಪ್ರಿಯತೆಗಳಿಸಿತು.

ಜನರ ವಿರೋಧ: ಟ್ರಾಂ ಸೇವೆಯನ್ನು ನಿಲ್ಲಿಸುವ ಸರ್ಕಾರದ ಕ್ರಮಕ್ಕೆ ಕೋಲ್ಕತಾ ಜನರು ಸೇರಿ ವಿವಿಧ ರೈಲು ಅಭಿಮಾನಿಗಳು ವಿರೋಧಿಸಿದ್ದಾರೆ. ಟ್ರಾಂ ಅತಿ ಕಡಿಮೆ ಬೆಲೆಯ ಸಾರಿಗೆ ವ್ಯವಸ್ಥೆಯಾಗಿದ್ದು, ಬಡಜನರಿಗೆ ಹೆಚ್ಚು ಅನುಕೂಲ ಮಾಡುತ್ತಿತ್ತು. ಇದನ್ನು ನಿಲ್ಲಿಸಿದರೆ, ಟ್ಯಾಕ್ಸಿ, ಬಸ್ಸುಗಳಿಗೆ ಹೆಚ್ಚು ಹಣ ತೆರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿಯೂ ಇತ್ತು ಟ್ರಾಂ:

ಕೋಲ್ಕತಾ ಸೇರಿದಂತೆ ಮುಂಬೈ, ಪಟನಾ, ಚೆನ್ನೈ ಮತ್ತು ನಾಸಿಕ್‌ನಲ್ಲಿಯೂ ಸಹ ಟ್ರಾಂ ಸಂಚಾರ ಇದಿತ್ತು. ಆದರೆ ಕಾಲಕ್ರಮೇಣ ಸೇವೆ ಸ್ಥಗಿತಗೊಂಡಿತು.