ಸಾರಾಂಶ
ಶಿವರಾತ್ರಿ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶವುಂಟಾಗಿ 14 ಮಕ್ಕಳಿಗೆ ಸುಟ್ಟ ಗಾಯಗಳಾದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಕೋಟಾ (ರಾಜಸ್ಥಾನ): ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಿವ ಮೆರವಣಿಗೆ ವೇಳೆ ಸಂಭವಿಸಿದ ವಿದ್ಯುತ್ ಸ್ಪರ್ಶದ ಅವಘಡದಲ್ಲಿ 14 ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಈ ಪೈಕಿ ಒಬ್ಬ ಶೇ.100 ಮತ್ತು ಇನ್ನೊಬ್ಬ ಶೇ.50ರಷ್ಟು ಸುಟ್ಟಗಾಯಗಳಿಗೆ ತುತ್ತಾಗಿದ್ದಾರೆ. ವಿದ್ಯುತ್ ಅವಘಡದಲ್ಲಿ ಗಾಯಗೊಂಡ ಎಲ್ಲಾ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತದೆ.
ಕೋಟಾದ ಸಕತೌರಾ ಪ್ರದೇಶ ಕಾಲಿಬಸ್ತಿ ಎಂಬಲ್ಲಿ ಮಕ್ಕಳನ್ನು ಒಳಗೊಂಡಿರುವ ಶಿವಭಕ್ತರ ಮೆರವಣಿಗೆಯಲ್ಲಿ ಸಾಗುತ್ತಿದ್ದವರು.
ಈ ವೇಳೆ ಬಾಲಕನೊಬ್ಬ ಹಿಡಿದಿದ್ದ 20 ಅಡಿಗೂ ಎತ್ತರದ ಭಾವುಟವನ್ನು ಒಳಗೊಂಡ ಬಿದಿರಿನ ಕೋಲು ಆಕಸ್ಮಿಕವಾಗಿ ರಸ್ತೆ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಗೆ ತಗುಲಿದೆ.
ಈ ವೇಳೆ ಬಿದಿರಿನ ಮೂಲಕ ವಿದ್ಯುತ್ ಹರಿದು ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ವೇಳೆ ವಿದ್ಯುತ್ ಸ್ಪರ್ಶದ ವಿಷಯ ಅರಿಯದೇ ಆತನ ಸಹಾಯಕ್ಕೆ ಬಂದ ಉಳಿದ ಮಕ್ಕಳೂ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಗಾಯಗೊಂಡಿದ್ದಾರೆ.