ಒಬ್ಬ ಕನ್ನಡಿಗ ಸೇರಿ ಕುವೈತಿಂದ 45 ಭಾರತೀಯರ ಶವ ಆಗಮನ

| Published : Jun 15 2024, 01:00 AM IST / Updated: Jun 15 2024, 05:44 AM IST

ಒಬ್ಬ ಕನ್ನಡಿಗ ಸೇರಿ ಕುವೈತಿಂದ 45 ಭಾರತೀಯರ ಶವ ಆಗಮನ
Share this Article
  • FB
  • TW
  • Linkdin
  • Email

ಸಾರಾಂಶ

ಕೊಲ್ಲಿ ದೇಶ ಕುವೈತ್‌ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿದ ಕನ್ನಡಿಗ, ಕಲಬುರಗಿ ಮೂಲದ ವಿಜಯಕುಮಾರ್‌ ಸೇರಿ 45 ಭಾರತೀಯರ ಶವಗಳು ತಾಯ್ನಾಡಿಗೆ ಆಗಮಿಸಿವೆ.

 ಕೊಚ್ಚಿ :  ಕೊಲ್ಲಿ ದೇಶ ಕುವೈತ್‌ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿದ ಕನ್ನಡಿಗ, ಕಲಬುರಗಿ ಮೂಲದ ವಿಜಯಕುಮಾರ್‌ ಸೇರಿ 45 ಭಾರತೀಯರ ಶವಗಳು ತಾಯ್ನಾಡಿಗೆ ಆಗಮಿಸಿವೆ. ಈ ಪೈಕಿ ಕೇರಳದ 23, ತಮಿಳುನಾಡಿನ 7 ಹಾಗೂ ಕರ್ನಾಟಕದ ಒಬ್ಬ ಕಾರ್ಮಿಕನ ಮೃತದೇಹವನ್ನು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಗಿದೆ. ಉಳಿಕೆ 14 ಶವಗಳನ್ನು ದೆಹಲಿಗೆ ರವಾನಿಸಲಾಗಿದೆ.

45 ಭಾರತೀಯರ ಕಳೇಬರ ಹೊತ್ತ ಭಾರತೀಯ ವಾಯುಪಡೆಯ ಸಿ130ಜೆ ವಿಮಾನ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಬಂದಿಳಿಯಿತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕೇಂದ್ರ ಸಚಿವ ಸುರೇಶ್‌ ಗೋಪಿ ಅವರು ಮೃತದೇಹಗಳಿಗೆ ಪುಷ್ಪಗುಚ್ಛವಿರಿಸಿ ಬರಮಾಡಿಕೊಂಡರು.

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಸಾವಿಗೀಡಾಗಿರುವುದು ದೇಶಕ್ಕೆ ದೊಡ್ಡ ದುರಂತವಾಗಿದೆ. ದುರ್ಘಟನೆ ಬಳಿಕ ಕುವೈತ್‌ ಸರ್ಕಾರ ಕಠಿಣ ಹಾಗೂ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತ ಸರ್ಕಾರ ಉತ್ತಮ ರೀತಿಯಲ್ಲಿ ಮಧ್ಯಪ್ರವೇಶಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕುವೈತ್‌ ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಪಿಣರಾಯಿ ಆಗ್ರಹಿಸಿದರು.

ಕುಟುಂಬಸ್ಥರ ಆಕ್ರಂದನ:

ಈ ನಡುವೆ, ಶವಗಳ ಆಗಮನದ ನಡುವೆ ಅವರವರ ಕುಟುಂಬಸ್ಥರ ಆಕ್ರಂದನ ಕೇರಳ, ಕರ್ನಾಟಕ, ಆಂಧ್ರ ಹಾಗೂ ಅವರ ವಿವಿಧ ತವರೂರುಗಳಲ್ಲಿ ಮುಗಿಲು ಮುಟ್ಟಿದೆ. ಕುಟುಂಬಕ್ಕಾಗಿ ದುಡಿಯಲು ಹೋದವರು ಹೆಣವಾಗಿ ಬಂದರಲ್ಲ ಎಂದು ಬಂಧುಗಳು ಕಂಬನಿ ಮಿಡಿಯುತ್ತಿರುವುದು ಹೃದಯ ಕಲಕುವಂತಿತ್ತು.

ಕುವೈತ್ ಅಗ್ನಿ ದುರಂತ,ಮತ್ತೊಬ್ಬ ಭಾರತೀಯ ಸಾವು

ದುಬೈ/ಕುವೈತ್‌: ಬುಧವಾರ ಮುಂಜಾನೆ ಕುವೈತ್‌ನ ಬಹುಮಡಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ನೆಲ ಮಹಡಿಯಲ್ಲಿದ್ದ ಕಾವಲುಗಾರನ ಕೊಠಡಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿ ನಡೆದಿದ್ದ ಭೀಕರ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ಮೂಲದ ಮತ್ತೊರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಒಟ್ಟು 175 ಭಾರತೀಯರು ಈ ಕಟ್ಟಡದಲ್ಲಿ ತಂಗಿದ್ದರು. ಕುವೈತ್‌ ಬೆಂಕಿ ಅವಘಡದಲ್ಲಿ ಸುಮಾರು 50 ಜನರು ಅಸುನೀಗಿದ್ದರು. ಆರು ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡಿದ್ದ ಶಾರ್ಟ್‌ ಸರ್ಕ್ಯೂಟ್‌ನಿಂದ ಹೊಗೆಯಾಡಲು ಸಾಧ್ಯವಾಗದೇ ಬಹುತೇಕರು ಉಸಿರು ನಿಲ್ಲಿಸಿದ್ದರು.