ಬಹುರಾಷ್ಟ್ರೀಯ ಕಂಪನಿ ಯಂಗ್‌ ಆ್ಯಂಡ್‌ ಅರ್ನೆಸ್ಟ್‌ನಲ್ಲಿ ಯುವತಿ ಸಾವು : ಕೆಲಸದ ಒತ್ತಡವೇ ಕಾರಣ ಆರೋಪ

| Published : Sep 20 2024, 01:35 AM IST / Updated: Sep 20 2024, 05:32 AM IST

ಸಾರಾಂಶ

ಬಹುರಾಷ್ಟ್ರೀಯ ಕಂಪನಿ ಯಂಗ್‌ ಆ್ಯಂಡ್‌ ಅರ್ನೆಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ಅನ್ನಾ ಸೆಬಾಸ್ಟಿನ್ ಪೆರಿಯಾಲಿ ಸಾವನ್ನಪ್ಪಿದ್ದು, ಕೆಲಸದ ಒತ್ತಡವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ.

ನವದೆಹಲಿ: ಬಹುರಾಷ್ಟ್ರೀಯ ಯಂಗ್‌ ಆ್ಯಂಡ್‌ ಅರ್ನೆಸ್ಟ್‌ ಕಂಪನಿಯ ಮಹಿಳಾ ಉದ್ಯೋಗಿ ಅನ್ನಾ ಸೆಬಾಸ್ಟಿನ್ ಪೆರಿಯಾಲಿ (26), ಕೆಲಸದ ಒತ್ತಡ ತಾಳಲಾಗದೇ ಸಾವನ್ನಪ್ಪಿದರು ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಆದೇಶಿಸಿದೆ.

ಮಗಳ ಸಾವಿಗೆ ಇ.ವೈ ನೀಡುತ್ತಿದ್ದ ಕೆಲಸದ ಹೊರೆಯೇ ಕಾರಣ ಎಂದು ಆಕೆಯ ತಾಯಿ ಕಂಪನಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತನಿಖೆ ಆದೇಶಿಸಿದೆ. ‘ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತವರಣದ ಕುರಿತು ತನಿಖೆ ನಡೆಸುತ್ತೇವೆ’ ಎಂದು ಸಚಿವೆ ಶೋಭಾ ಕರಂದ್ಲಾಜೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಆಗಿದ್ದೇನು?

2023ರಲ್ಲಿ ಸಿಎ ತೇರ್ಗಡೆಯಾಗಿದ್ದ ಅನ್ನಾ, ಮಾರ್ಚ್‌ನಲ್ಲಿ ಪುಣೆಯಲ್ಲಿನ ಇ.ವೈನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 4 ತಿಂಗಳು ಕೆಲಸ ಮಾಡಿದ್ದ ಆಕೆ, ಜುಲೈನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದಕ್ಕೆ ಕಂಪನಿಯೇ ಕಾರಣವೆಂದು ತಾಯಿ ಅನಿತಾ ಅಗರ್ಸ್ಟೈನ್‌ ಭಾರತದಲ್ಲಿನ ಇ.ವೈ ಸಂಸ್ಥೆಯ ಅಧ್ಯಕ್ಷ ರಾಜೀವ್ ಮೆಮಾನಿಗೆ ಪತ್ರ ಬರೆದಿದ್ದರು.

‘ಇವೈ ಆಕೆಯ ಮೊದಲ ಉದ್ಯೋಗ. ಕೆಲಸಕ್ಕೆ ಸೇರಿದ ಬಳಿಕ, ಆಕೆ ತಂಡದ ಹಲವರು ಕೆಲಸದ ಹೊರೆ ಕಾರಣಕ್ಕೆ ರಾಜೀನಾಮೆ ನೀಡಿದ್ದರು ಎಂಬುದು ತಿಳಿಯಿತು. ಆಕೆಯ ಮ್ಯಾನೇಜರ್‌ ತಡರಾತ್ರಿ , ವಾರಂತ್ಯದಲ್ಲಿಯೂ ದುಡಿಸಿಕೊಳ್ಳುತ್ತಿದ್ದರು. ದಿನಕ್ಕೆ 16 ಗಂಟೆ ದುಡಿಯಬೇಕಾಗಿತ್ತು. ಪರಿಣಾಮ ಆಕೆ ವಿಶ್ರಾಂತಿ ಇಲ್ಲದೇ ನಿದ್ರಾಹೀನಳಾದಳು. ಪ್ರಶ್ನಿಸಿದರೆ, ನಾವೆಲ್ಲ ರಾತ್ರಿ ಕೆಲಸ ಮಾಡುತ್ತೇವೆ. ನೀವು ಮಾಡಬಹುದು ಎಂದಿದ್ದರು. ಇ.ವೈ ತನ್ನ ಕೆಲಸಕ್ಕಾಗಿ ಉದ್ಯೋಗಿಗಳನ್ನು ನಿರ್ಲಕ್ಷಿಸುತ್ತದೆ. ಇದು ಅನ್ನಾ ಪರಿಸ್ಥಿತಿ ಮಾತ್ರವಲ್ಲ. ಬಹುತೇಕ ಹೊಸಬರದ್ದು ಇದೇ ಸ್ಥಿತಿ. ಆಕೆಯ ಸಾವು ಇವೈಗೆ ಎಚ್ಚರಿಕೆಯ ಗಂಟೆಯಾಗಿರಲಿ’ ಎಂದು ಪತ್ರ ಬರೆದಿದ್ದರು.