ದೇಶಭ್ರಷ್ಟನಾಗಿ ಬ್ರಿಟನ್‌ಗೆ ಪಲಾಯನ ಮಾಡಿರುವ ವಿಜಯ್‌ ಮಲ್ಯರ ಜನ್ಮದಿನದ ಹಿನ್ನೆಲೆಯಲ್ಲಿ ಮತ್ತೊಬ್ಬ ದೇಶಭ್ರಷ್ಟ ಉದ್ಯಮಿ ಲಲಿತ್ ಮೋದಿ, ಲಂಡನ್‌ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು.

ಲಂಡನ್‌: ದೇಶಭ್ರಷ್ಟನಾಗಿ ಬ್ರಿಟನ್‌ಗೆ ಪಲಾಯನ ಮಾಡಿರುವ ವಿಜಯ್‌ ಮಲ್ಯರ ಜನ್ಮದಿನದ ಹಿನ್ನೆಲೆಯಲ್ಲಿ ಮತ್ತೊಬ್ಬ ದೇಶಭ್ರಷ್ಟ ಉದ್ಯಮಿ ಲಲಿತ್ ಮೋದಿ, ಲಂಡನ್‌ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಮಲ್ಯ 70ನೇ ಜನ್ಮದಿನದ ಅಂಗವಾಗಿ ತಾವು ಆಯೋಜಿಸಿದ್ದ ಪಾರ್ಟಿಯಲ್ಲಿ ಮಲ್ಯ ಭಾಗಿಯಾಗಿದ್ದ ಫೋಟೋವನ್ನು ಐಪಿಎಲ್‌ ಜನಕ ಲಲಿಕ್‌ ಮೋದಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಯೋಕಾನ್‌ ಸ್ಥಾಪಕಿ ಕಿರಣ್‌ ಮಜೂಮ್ದಾರ್‌ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಮಲ್ಯ, ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರು. ವಂಚಿಸಿದ ಪ್ರಕರಣದ ಆರೋಪಿಯಾಗಿದ್ದರೆ, ಮೋದಿ ಐಪಿಎಲ್‌ನಲ್ಲಿ ಗೋಲ್ಮಾಲ್‌ ನಡೆಸಿದ ಆರೋಪ ಹೊತ್ತಿದ್ದಾರೆ.

ರಾಮ ಹಿಂದುವಲ್ಲ, ಮುಸ್ಲಿಂ: ಟಿಎಂಸಿ ಶಾಸಕ ವಿವಾದ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ವಿವಾದಾತ್ಮಕ ಹೇಳಿಕೆಗಳ ಸರಣಿ ಮುಂದುವರೆದಿದ್ದು, ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಶಾಸಕ ಮದನ್ ಮಿತ್ರ ’ ರಾಮ ಹಿಂದುವಲ್ಲ, ಮುಸ್ಲಿಂ’ ಎಂದಿದ್ದಾರೆ. ಕಮರ್ಹತಿ ಶಾಸಕ ಮಿತ್ರ ಸಾರ್ವಜನಿಕ ಸಭೆಯೊಂದರಲ್ಲಿ ಈ ರೀತಿ ಕೀಳು ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ‘ಎಕ್ಸ್‌’ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ‘ ಮದನ್‌ ಮಿತ್ರ ಅವರ ಅತಿರೇಕದ ಹೇಳಿಕೆ ಹಿಂದೂ ನಂಬಿಕೆಗೆ ಉದ್ದೇಶಪೂರ್ವಕವಾಗಿ ಮಾಡುವ ಅವಮಾನ. ಸಂಸ್ಕೃತಿ ಮತ್ತು ಇತಿಹಾಸದ ಕುರಿತಾದ ಇಂತಹ ಹೇಳಿಕೆ ನಾಲಿಗೆ ಜಾರಿ ಬರುವಂತೆ ಕಾಣುತ್ತಿಲ್ಲ. ಇದು ಬಾಂಗ್ಲಾ ಅಕ್ರಮ ವಲಸಿಗರ ಪರವಾಗಿರುವಂತಿದೆ ಎಂದು ಕಿಡಿಕಾರಿದೆ.

ಹೊಸ ವರ್ಷಕ್ಕ ಜಿಯೋ, ಏರ್‌ಟೆಲ್‌, ವೊಡಾ ದರ ಏರಿಕೆ ಶಾಕ್‌ ಸಾಧ್ಯತೆ

ನವದೆಹಲಿ: ಭಾರತದ ಪ್ರಮುಖ ಖಾಸಗಿ ದೂರಸಂಪರ್ಕ ಕಂಪನಿಗಳಾದ ರಿಲಯನ್ಸ್‌ ಜಿಯೋ, ಭಾರ್ತಿ ಏರ್‌ಟೆಲ್‌, ವೋಡಾಫೋನ್‌ ಐಡಿಯಾ 2026ರಿಂದ ತಮ್ಮ ಮೊಬೈಲ್‌ ಶುಲ್ಕವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಕಂಪನಿಗಳು ಪ್ರೀಪೇಯ್ಡ್‌ ಮತ್ತು ಪೋಸ್ಟ್‌ ಪೇಯ್ಡ್‌ ಎರಡೂ ಮಾದರಿಯ ಸೇವಾ ಶುಲ್ಕವನ್ನು ಶೇ.20ರವರೆಗೂ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ. ಸಾಮಾನ್ಯವಾಗಿ ಟೆಲಿಕಾಂ ಕಂಪನಿಗಳು ಪ್ರತಿ 2 ವರ್ಷಕ್ಕೊಮ್ಮೆ ದರ ಹೆಚ್ಚಳ ಮಾಡುತ್ತವೆ. ಅದರಂತೆ ಈ ಹಿಂದೆ 2024ರಲ್ಲಿ ದರ ಹೆಚ್ಚಾಳ ಮಾಡಿದ್ದ ಕಂಪನಿಗಳು ಮತ್ತೆ ದರ ಹೆಚ್ಚಳದತ್ತ ಹೆಜ್ಜೆ ಇಟ್ಟಿವೆ ಎನ್ನಲಾಗಿದೆ.

13 ಜನರ ಬಲಿ ಪಡೆದ ದಿಲ್ಲಿ ಸ್ಫೋಟ ಕೇಸಲ್ಲಿ 9ನೇ ಆರೋಪಿ ಸೆರೆ

ನವದೆಹಲಿ: 13 ಜನರನ್ನು ಬಲಿ ಪಡೆದ ನ.10ರ ದೆಹಲಿಯ ಕೆಂಪುಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧ ಎನ್ಐಎ ಅಧಿಕಾರಿಗಳು ಯಾಸಿರ್‌ ಅಹ್ಮದ್‌ ದಾರ್‌ ಎಂಬಾತನನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೇರಿಕೆಯಾಗಿದೆ. ಟೆರರ್‌ ಡಾಕ್ಟರ್‌ ನಬಿ ಮತ್ತು ಜೈಷ್‌ ಸಂಚು ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ಧಾರ್‌ ಬಂಧನವಾಗಿದೆ. ಈತನನ್ನು ಪಟಿಯಾಲ ಕೋರ್ಟ್‌ ಡಿ.26ರ ತನಕ ಎನ್‌ಐಎ ವಶಕ್ಕೊಪ್ಪಿಸಿದೆ. ಕಳೆದ ವಾರವಷ್ಟೇ , ದಾಳಿಯ ರುವಾರಿ ಡಾ. ಉಮರ್‌ ನಬಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಹೊಂದಿದ್ದ ಬಾರಾಮುಲ್ಲಾ ನಿವಾಸಿ ಡಾ. ಬಿಲಾಲ್ ಮಲ್ಲಾ ಎಂಬಾತನ ಬಂಧನವಾಗಿತ್ತು.

ಉದ್ಧವ್‌ ಜತೆ ಮೈತ್ರಿ ವಿಫಲ: ಬಿಎಂಸಿಯಲ್ಲಿ ಕೈ ಏಕಾಂಗಿ ಕಣಕ್ಕೆ

ಮುಂಬೈ: ಜ.15ರಂದು ನಡೆಯಲಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದೆ. ಶಿವಸೇನೆ (ಉದ್ಧಬ್‌ ಬಣ) ಜತೆಗಿನ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್‌ ವಕ್ತಾರ ಸಚಿನ್‌ ಸಾವಂತ್‌, ‘ಉದ್ಧವ್‌ರ ಬಣವು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್‌) ಜತೆ ಕೈಜೋಡಿಸಿದರೆ ನಾವು ಬಿಎಂಸಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ. ನಮ್ಮ ಹಾಗೂ ಎಂಎನ್‌ಎಸ್‌ ಸಿದ್ಧಾಂತಗಳು ಭಿನ್ನವಾಗಿದ್ದು, ಅದರಲ್ಲಿ ರಾಜಿ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ರಾಜಕೀಯವಾಗಿ, ಮುಂಬೈ, ಪುಣೆ ಮತ್ತು ಥಾಣೆಯಂತಹ ಪಾಲಿಕೆ ಚುನಾವಣೆಗಳು ರಾಜ್ಯ ರಾಜಕೀಯ ದಿಕ್ಕನ್ನು ನಿರ್ಧರಿಸುವ ಕಾರಣ ಅವುಗಳನ್ನು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಬಿಎಂಸಿ ಚುನಾವಣೆಯ ಮತೆಣಿಕೆ 16ರಂದು ನಡೆಯಲಿದೆ.

ರಾಹುಲ್ ಅತ್ಯಾಪ್ತನ ಪತ್ನಿ, ಶಾಸಕಿ ಬಿಜೆಪಿ ಸೇರ್ಪಡೆ

ಮುಂಬೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಪ್ತ ದಿ.ರಾಜೀವ್‌ ಸತವ್‌ ಪತ್ನಿ, ಮಹಾರಾಷ್ಟ್ರ ವಿಧಾನ ಪರಿಷತ್‌ ಸದಸ್ಯೆ ಪ್ರಜ್ಞಾ ಸತವ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಮೇಲ್ಮನೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಶಾಸಕಿಯ ನಡೆ ಪಕ್ಷಕ್ಕೆ ಮುಜುಗರ ತಂದೊಡ್ಡಿದೆ. ಇದರ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದ್ದು, ‘ ಬಿಜೆಪಿ ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ. ಪಕ್ಷವನ್ನು ಹಣ ಮತ್ತು ಅಧಿಕಾರದಿಂದ ಒಡೆಯುತ್ತಿದೆ’ ಎಂದು ಕಿಡಿಕಾರಿದೆ.