ನೀರವ್‌, ವಿಜಯ್‌ ಮಲ್ಯ ಗಡೀಪಾರು ಸನ್ನಿಹಿತ?

| N/A | Published : Sep 07 2025, 01:01 AM IST / Updated: Sep 07 2025, 04:28 AM IST

Vijay Mallya and Nirav Modi

ಸಾರಾಂಶ

ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರು.ವಂಚಿಸಿ ವಿದೇಶಗಳಿಗೆ ಪರಾರಿಯಾಗಿರುವ ವಂಚಕ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಸೇರಿದಂತೆ ಬ್ರಿಟನ್‌ನಲ್ಲಿರುವ ಕೆಲವು ದೇಶಭ್ರಷ್ಟರು ಶೀಘ್ರವೇ ಭಾರತಕ್ಕೆ ಗಡೀಪಾರಾಗುವ ಸಾಧ್ಯತೆ ಕಂಡುಬಂದಿದೆ.

 ನವದೆಹಲಿ: ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರು.ವಂಚಿಸಿ ವಿದೇಶಗಳಿಗೆ ಪರಾರಿಯಾಗಿರುವ ವಂಚಕ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಸೇರಿದಂತೆ ಬ್ರಿಟನ್‌ನಲ್ಲಿರುವ ಕೆಲವು ದೇಶಭ್ರಷ್ಟರು ಶೀಘ್ರವೇ ಭಾರತಕ್ಕೆ ಗಡೀಪಾರಾಗುವ ಸಾಧ್ಯತೆ ಕಂಡುಬಂದಿದೆ.

ಭಾರತಕ್ಕೆ ಗಡೀಪಾರು ತಪ್ಪಿಸಿಕೊಳ್ಳಲು ಇಬ್ಬರೂ ಆರೋಪಿಗಳು, ಭಾರತದ ಜೈಲುಗಳಲ್ಲಿನ ಅವ್ಯವಸ್ಥೆಯನ್ನೇ ಪ್ರಮುಖವಾಗಿ ಉಲ್ಲೇಖಿಸಿದ್ದರು. ಅಲ್ಲಿಗೆ ಹೋದರೆ ತಾವು ಕಾಯಿಲೆ ಬಿದ್ದು ಸಾಯುವ ಗಂಭೀರ ಆರೋಪಗಳನ್ನು ಮಾಡಿದ್ದರು. ಅದರ ಬೆನ್ನಲ್ಲೇ ಬ್ರಿಟನ್‌ನ ಜೈಲು ಅಧಿಕಾರಿಗಳ ತಂಡವೊಂದು ಇತ್ತೀಚೆಗೆ ದೆಹಲಿಯ ತಿಹಾರ್‌ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ವಿಜಯ್‌ ಮಲ್ಯ ಗಡೀಪಾರಿಗೆ ಸಂಬಂಧಿಸಿದಂತೆ ಭಾರತದ ಜೈಲಿನ ಸ್ಥಿತಿ ಬಗ್ಗೆ ಬ್ರಿಟನ್‌ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ಆಗ ಭಾರತವು ಜೈಲಿನ ಸ್ಥಿತಿ ಉನ್ನತೀಕರಿಸಲಾಗುತ್ತದೆ ಎಂದು ಭರವಸೆ ನೀಡಿತ್ತು. ಮತ್ತೊಂದೆಡೆ ಗಡೀಪಾರು ಜಾರಿಯಾಗಿದ್ದರೂ ಸಹ ನೀರವ್‌ ಮೋದಿಯನ್ನು ಬ್ರಿಟನ್‌ನ ಜೈಲಿನಲ್ಲಿಯೇ ಇರಿಸಿಕೊಂಡಿದೆ. ಇದರ ಬೆನ್ನಲ್ಲೇ ಬ್ರಿಟನ್‌ನ ಕ್ರೌನ್‌ ಪ್ರಾಸಿಕ್ಯೂಷನ್‌ ಸರ್ವೀಸ್‌ನ ಅಧಿಕಾರಿಗಳು ತಿಹಾರ್‌ಗೆ ಭೇಟಿ ನೀಡಿ ಅಲ್ಲಿನ ಕೈದಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಜೈಲಿನ ಸ್ಥಿತಿಗತಿಯ ಕುರಿತು ಕೂಲಂಕಷ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಹುಬೇಡಿಕೆ ವಂಚಕರಿಗೆ ಬೇಕಿದ್ದರೆ ‘ವಿಶೇಷ ವ್ಯವಸ್ಥೆ’ ಮಾಡುವುದಾಗಿ ಭಾರತದ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೀರವ್‌ ಮೋದಿ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ 13800 ಕೋಟಿ ರು. ವಂಚಿಸಿ ಮತ್ತು ವಿಜಯ್‌ ಮಲ್ಯ ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕ್‌ಗಳಿಗೆ 9000 ಕೋಟಿ ರು. ವಂಚಿಸಿ ಪರಾರಿಯಾದ ಆರೋಪ ಎದುರಿಸುತ್ತಿದ್ದಾರೆ.

Read more Articles on