ಚಲಿಸುವಾಗ ಹೊತ್ತಿ ಉರಿದ ಲ್ಯಾಂಬೋರ್ಗಿನಿ : ಐಷಾರಾಮಿ ಕಾರಿನ ಸುರಕ್ಷತೆ ಬಗ್ಗೆ ಕಳವಳ

| Published : Dec 27 2024, 12:46 AM IST / Updated: Dec 27 2024, 04:59 AM IST

ಸಾರಾಂಶ

ಮುಂಬೈನ ಕರಾವಳಿ ರಸ್ತೆಯಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಘಟನೆ ಗುರುವಾರ ನಡೆದಿದೆ.

ಮುಂಬೈ: ಮುಂಬೈನ ಕರಾವಳಿ ರಸ್ತೆಯಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಘಟನೆ ಗುರುವಾರ ನಡೆದಿದೆ. ಇದು ಕೋಟ್ಯಂತರ ರು. ಬೆಲೆ ಬಾಳುವ ಐಷಾರಾಮಿನ ಕಾರಿನ ಸುರಕ್ಷತೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಲ್ಯಾಂಬೋರ್ಗಿನಿ ಹೊತ್ತಿ ಉರಿಯಲು ನಿಖರ ಕಾರಣ ತಿಳಿದು ಬಂದಿಲ್ಲ.

ಈ ಕುರಿತ ವಿಡಿಯೋವನ್ನು ರೇಮಂಡ್ಸ್‌ ಸಂಸ್ಥೆ ಅಧ್ಯಕ್ಷ ಗೌತಮ್ ಸಿಂಘಾನಿಯಾ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಲ್ಯಾಂಬೋರ್ಗಿನಿ ಸುರಕ್ಷತೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ‘ಈ ರೀತಿಯ ಘಟನೆಗಳು ಲ್ಯಾಂಬೋರ್ಗಿನಿಯ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ತೀವ್ರ ಕಳವಳ ಉಂಟು ಮಾಡುತ್ತದೆ. ಬೆಲೆ ಮತ್ತು ಪ್ರತಿಷ್ಠೆಗಾಗಿ ಜನರು ರಾಜಿಯಾಗದ ಗುಣಮಟ್ಟ ನಿರೀಕ್ಷಿಸುತ್ತಾರೆ ಹೊರತು ಸಂಭಾವ್ಯ ಅಪಾಯಗಳನ್ನಲ್ಲ’ ಎಂದಿದ್ದಾರೆ.

ಶಬರಿಮಲೆಯಲ್ಲಿ ಮೊದಲ ಹಂತದ ಮಂಡಲ ಪೂಜೆ ಪೂರ್ಣ: 32 ಲಕ್ಷ ಜನ ಭೇಟಿ

ಪಟ್ಟಣಂತಿಟ್ಟ: ಕೇರಳದ ಪ್ರಸಿದ್ಧ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮೊದಲ ಹಂತದ ಮಂಡಲ ಪೂಜೆ ಗುರುವಾರ ಪೂರ್ಣಗೊಂಡಿದೆ. ಬುಧವಾರದ ಅಂತ್ಯಕ್ಕೆ 32.5 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿದೆ. ಗುರುವಾರ ರಾತ್ರಿ ದೇಗುಲದ ಬಾಗಿಲು ಮುಚ್ಚಲಾಗಿದ್ದು, ದೇಗುಲ ಮತ್ತೆ ಡಿ.30ರ ಸಂಜೆ 5ಕ್ಕೆ ಮಕರವಿಳಕ್ಕು ಉತ್ಸವಕ್ಕಾಗಿ ತೆರೆಯಲಿದೆ. ಮಂಡಲ ಪೂಜೆಯು ವಾರ್ಷಿಕ ತೀರ್ಥಯಾತ್ರೆಯ 41 ದಿನದ ಮೊದಲ ಹಂತವಾಗಿದೆ. ಎರಡನೇ ಹಂತ ಜ.14ರವರೆಗೂ ನಡೆಯಲಿದೆ.

ಜಮ್ಮು ಕಾಶ್ಮೀರದ ಖ್ಯಾತ ರೇಡಿಯೋ ಜಾಕಿ ಸಿಮ್ರನ್‌ ರೂಂನಲ್ಲಿ ಶವವಾಗಿ ಪತ್ತೆ

ಗುರುಗ್ರಾಮ: ಜಮ್ಮು ಕಾಶ್ಮೀರದ ಖ್ಯಾತ ರೇಡಿಯೋ ಜಾಕಿ ಸಿಮ್ರನ್‌ (25), ಗುರುವಾರ ಗುರುಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಲ್ಲಿನ ಸೆಕ್ಟರ್‌ 47ರ ತಮ್ಮ ಅಪಾರ್ಟ್‌ಮೆಂಟ್‌ನ ಕೋಣೆಯಲ್ಲಿ ಸಿಮ್ರನ್‌ರ ಶವ ಕಂಡು ಅವರ ಸ್ನೇಹಿತೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಸಿಮ್ರನ್‌ ಅವರು ಜಮ್ಮು ಕಾಶ್ಮೀರದ ನಿವಾಸಿಯಾಗಿದ್ದು, ತಮ್ಮ ರೇಡಿಯೋ ಕಾರ್ಯಕ್ರಮದ ಮೂಲಕ ‘ಜಮ್ಮು ಕಿ ದಢಕನ್‌’ (ಜಮ್ಮುವಿನ ಹೃದಯಬಡಿತ) ಎಂದೇ ಖ್ಯಾತರಾಗಿದ್ದರು. ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನನಗೆ ಸಿಎಂ, ಡಿಸಿಎಂ ಪೋಸ್ಟ್‌ ಆಫ್‌ರ್‌ ಇತ್ತು: ನಟ ಸೋನು ಸೂದ್‌!

ಮುಂಬೈ: ಕೋವಿಡ್‌ ಲಾಕ್‌ಡೌನ್‌ ಸಂದರ್ಭ ನೀಡಿದ ಮಾನವೀಯ ನೆರವುಗಳು ರಾಜಕೀಯ ಪ್ರವೇಶಕ್ಕೆ ವೇದಿಕೆಯ ಸೃಷ್ಟಿ ಎಂದು ಹಬ್ಬಿದ ಹಲವು ವದಂತಿಗಳಿಗೆ ನಟ ಸೋನು ಸೂದ್‌ ತೆರೆ ಎಳೆದಿದ್ದಾರೆ. ತಾವು ಪ್ರಮುಖ ರಾಜಕೀಯ ಹುದ್ದೆಗಳನ್ನು ನಯವಾಗಿ ತಿರಸ್ಕರಿಸಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ರಾಜಕೀಯ ಪ್ರವೇಶದ ವದಂತಿ ಅಲ್ಲಗಳೆದಿರುವ ನಟ, ‘ನನಗೆ ಮುಖ್ಯಮಂತ್ರಿ ಆಹ್ವಾನ ಬಂದಾಗ ತಿರಸ್ಕರಿಸಿದೆ. ಮತ್ತೆ ಡಿಸಿಎಂ, ರಾಜ್ಯಸಭೆ ಸದಸ್ಯ ಹುದ್ದೆಗೆ ಕೇಳಿದರು. ನಮ್ಮೊಡನೆ ಸೇರಿ, ನೀವು ಚುನಾವಣೆಗೆ ಸ್ಪರ್ಧಿಸುವ ಅಗತ್ಯವಿಲ್ಲ, ನಮ್ಮ ಜೊತೆಗಿರಿ ಎಂದು ಪ್ರಭಾವಿ ರಾಜಕೀಯ ನಾಯಕರೇ ಕೇಳಿದ್ದರು. ಆದರೆ ಅದೆಲ್ಲವನ್ನೂ ನಾನು ತಿರಸ್ಕರಿಸಿದ್ದೆ’ ಎಂದು ಹೇಳಿದ್ದಾರೆ.