ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿದ ತೀವ್ರ ಚಾಟಿಯ ಬೆನ್ನಲ್ಲೇ, ಶಸ್ತ್ರಸಜ್ಜಿತ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಭದ್ರಕೋಟೆಯ ನಡುವೆ ಮದುರೈನ ತಿರುಪ್ಪರನ್ಕುಂದ್ರಂ ಬೆಟ್ಟದ ವಿವಾದಿತ ದೀಪಸ್ತಂಭದ ಮೇಲೆ ಶನಿವಾರ ಸಂಜೆ 5 ಗಂಟೆಗೆ ಸಾಂಪ್ರದಾಯಿಕ ಕಾರ್ತಿಕ ದೀಪವು ಪ್ರಜ್ವಲಿಸಿತು
ಮದುರೈ : ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿದ ತೀವ್ರ ಚಾಟಿಯ ಬೆನ್ನಲ್ಲೇ, ಶಸ್ತ್ರಸಜ್ಜಿತ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಭದ್ರಕೋಟೆಯ ನಡುವೆ ಮದುರೈನ ತಿರುಪ್ಪರನ್ಕುಂದ್ರಂ ಬೆಟ್ಟದ ವಿವಾದಿತ ದೀಪಸ್ತಂಭದ ಮೇಲೆ ಶನಿವಾರ ಸಂಜೆ 5 ಗಂಟೆಗೆ ಸಾಂಪ್ರದಾಯಿಕ ಕಾರ್ತಿಕ ದೀಪವು ಪ್ರಜ್ವಲಿಸಿತು. 150 ವರ್ಷಕ್ಕೂ ಹೆಚ್ಚು ಅವಧಿಯ ನಂತರ ದೀಪಸ್ತಂಭದ ಮೇಲೆ ಮೊದಲ ಬಾರಿ ದೀಪ ಬೆಳಗಿದೆ ಎಂಬುದು ಇಲ್ಲಿ ಗಮನಾರ್ಹ,
ಇದರ ಬೆನ್ನಲ್ಲೇ, ‘ವೆಟ್ರಿವೇಲ್, ವೀರವೇಲ್’ ಹಾಗೂ ‘ವೆಟ್ರಿವೇಲ್ ಮುರುಗನುಕ್ಕು ಅರೋಹರ’ ಎಂಬ ಭಕ್ತರ ಮುಗಿಲು ಮುಟ್ಟುವ ಜಯಘೋಷಗಳ ನಡುವೆ ಈ ಐತಿಹಾಸಿಕ ಧಾರ್ಮಿಕ ವಿಧಿವಿಧಾನವು ಯಶಸ್ವಿಯಾಗಿ ನೆರವೇರಿತು.
ಮಂಗಳಾರತಿಯ ಬಳಿಕ, ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಹಾಗೂ ಮದುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರ ನೇರ ಉಸ್ತುವಾರಿಯಲ್ಲಿ ಅರ್ಚಕರು ಸ್ತಂಭದ ಮೇಲೆ ದೀಪ ಬೆಳಗಿಸಿದರು.
ಸುರಕ್ಷಿತವಾಗಿ ದೀಪ ಬೆಳಗಿಸಲು ಕಲ್ಲಿನ ಸ್ತಂಭದ ಸುತ್ತಲೂ ತಾತ್ಕಾಲಿಕ ಅಟ್ಟಣಿಗೆ ಮತ್ತು ವೇದಿಕೆಯನ್ನು ನಿರ್ಮಿಸಲಾಗಿತ್ತು. \ಈ ಪವಿತ್ರ ದೀಪಕ್ಕಾಗಿ ಸುಮಾರು 30 ಕೇಜಿ ತುಪ್ಪ, 50 ಮೀ. ಉದ್ದದ ಹತ್ತಿ ಬತ್ತಿ ಮತ್ತು 5 ಕೆಜಿ ಕರ್ಪೂರವನ್ನು ಬಳಸಲಾಗಿತ್ತು.
ಸುಪ್ರೀಂ ಚಾಟಿ ಬಳಿಕ ದೀಪ:
ತಮಿಳುನಾಡು ಸರ್ಕಾರ ನ.20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲಂಘಿಸಿ, ಉಚ್ಚಿಪಿಳ್ಳೈಯಾರ್ ಮಂಟಪದಲ್ಲಿ ಮಾತ್ರ ದೀಪ ಬೆಳಗಿಸಿತ್ತು. ಆದರೆ ದೀಪಸ್ತಂಭದ ಮೇಲೆ ದೀಪ ಹಚ್ಚಲು ನಿರಾಕರಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಶುಕ್ರವಾರ ರಾಜ್ಯ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ದೇವಸ್ಥಾನದ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿ, ಆಡಳಿತದ ಜವಾಬ್ದಾರಿಯನ್ನು ನಿವೃತ್ತ ನ್ಯಾಯಮೂರ್ತಿಗಳಿಗೆ ಹಾಗೂ ಇಡೀ ಬೆಟ್ಟದ ಭದ್ರತೆಯನ್ನು ಸಿಆರ್ಪಿಎಫ್ಗೆ ಹಸ್ತಾಂತರಿಸಿ ಶನಿವಾರವೇ ದೀಪ ಬೆಳಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.
ಸಿಆರ್ಪಿಎಫ್ ಸರ್ಪಗಾವಲು:
ಕಾನೂನು ಸುವ್ಯವಸ್ಥೆ ಮತ್ತು ಜನಸಂದಣಿ ನಿಯಂತ್ರಣದ ದೃಷ್ಟಿಯಿಂದ ಕೇವಲ 50 ಭಕ್ತರ ಒಂದು ತಂಡಕ್ಕೆ ಮಾತ್ರ ಬೆಟ್ಟ ಹತ್ತಲು ಅನುಮತಿ ನೀಡಲಾಗಿತ್ತು. ಸಮೀಪದಲ್ಲೇ ಇರುವ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾದ ಸುತ್ತಲೂ ಸುಪ್ರೀಂ ನಿರ್ದೇಶನದಂತೆ 50 ಮೀ. ಬಫರ್ ವಲಯವನ್ನು ಸಿಆರ್ಪಿಎಫ್ ನಿರ್ಮಿಸಿ, ದೇವಸ್ಥಾನದ ಭಕ್ತರು ಮತ್ತು ದರ್ಗಾಕ್ಕೆ ಭೇಟಿ ನೀಡುವ ಮುಸ್ಲಿಂ ಯಾತ್ರಾರ್ಥಿಗಳಿಗೆ ಯಾವುದೇ ಅಡಚಣೆಯಾಗದಂತೆ ಕಟ್ಟೆಚ್ಚರ ವಹಿಸಿತ್ತು. ಬೆಟ್ಟದ ತಪ್ಪಲಿನಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡು ಭಾವುಕರಾದರು.
ಮುಸ್ಲಿಮರ ವಿರೋಧವಿಲ್ಲ- ಹರ್ಷ:
ದೀಪೋತ್ಸವದ ಉಸ್ತುವಾರಿ ಹೊತ್ತಿದ್ದ ನ್ಯಾ। ವೈದ್ಯನಾಥನ್ ಮಾತನಾಡಿ, ‘ಸುಪ್ರೀಂ ಕೋರ್ಟ್ ಆದೇಶವನ್ನು ಪೂರೈಸಲಾಗಿದೆ. ದೀಪ ಬೆಳಗಿಸುವುದಕ್ಕೆ ಮುಸ್ಲಿಂ ಸಮುದಾಯದಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ತಿರುಪ್ಪರನ್ಕುಂದ್ರಂ ಬೆಟ್ಟದಲ್ಲಿ ಸಾಮರಸ್ಯ ನೆಲೆಸಿದೆ. ದೀಪೋತ್ಸವದಿಂದ ಅಶಾಂತಿ ಉಂಟಾಗುತ್ತದೆ ಎಂಬ ಆರೋಪ ಮಾಡಿ ವಿಷಯವನ್ನು ರಾಜಕೀಯಗೊಳಿಸಲಾಗುತ್ತಿದೆ’ ಎಂದರು.
150 ವರ್ಷದಲ್ಲೇ ಮೊದಲು:
ಈ ಕಲ್ಲಿನ ದೀಪಸ್ತಂಭದ ಮೇಲೆ ಸುಮಾರು 150 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾರ್ತಿಕ ದೀಪವನ್ನು ಬೆಳಗಿಸಲಾಗಿದೆ. ಈ ಸ್ಥಳದಲ್ಲಿ ದೀಪ ಹಚ್ಚಲು ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ 1862 ಮತ್ತು 1912 ರಲ್ಲಿ ನಡೆದ ಪ್ರಯತ್ನಗಳು ವಿಫಲವಾಗಿದ್ದವು. ಕಳೆದ 150 ವರ್ಷಗಳಿಗೂ ಹೆಚ್ಚು ಕಾಲ ಬೆಟ್ಟದ ಕೆಳಭಾಗದಲ್ಲಿರುವ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಬಳಿಯ ''ದೀಪ ಮಂಟಪ''ದಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ದೀಪ ಬೆಳಗಿಸಲಾಗುತ್ತಿತ್ತು.
ದೇಗುಲದ ಪಕ್ಕ ದರ್ಗಾ ಇರುವುದು ಹಾಗೂ ಇದು ದೀಪಸ್ತಂಭವಲ್ಲ. ಬ್ರಿಟಿಷರು ನೆಟ್ಟ ಸರ್ವೇ ಕಂಬ ಎಂಬ ಅಂಶಗಳು ದೀಪ ಪ್ರಜ್ವಲನಕ್ಕೆ ಅಡ್ಡಿ ಆಗಿತ್ತು. 90ರ ದಶಕದಲ್ಲಿ ಆರ್ಎಸ್ಎಸ್ ಅಂಗಸಂಸ್ಥೆಯಾದ ಹಿಂದೂ ಮುನ್ನಣಿ ಮೊದಲ ಬಾರಿ ದೀಪ ಹಚ್ಚಲು ಪ್ರಯತ್ನಿಸಿತು ಮತ್ತು ನ್ಯಾಯಾಲಯದ ಹೋರಾಟಗಳು ನಡೆದವು. ಈ ಯತ್ನ ಆರಂಭದ 4 ದಶಕಗಳ ನಂತರ ಅದಕ್ಕಾಗಿ ಹೋರಾಡಿದವರ ಕನಸುಗಳು ನನಸಾಗಿದೆ.
