ಸಾರಾಂಶ
ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅದರ ತ್ರಿಭಾಷಾ ಪಠ್ಯಕ್ರಮದೊಂದಿಗೆ ಜಾರಿಗೆ ತರಲು ಆದೇಶ ನೀಡುವಂತೆ ಕೋರಿ ತಮಿಳುನಾಡಿನ ವಕೀಲ, ರಾಜ್ಯ ಬಿಜೆಪಿ ಕಾನೂನು ಕೋಶದ ಮುಖ್ಯಸ್ಥ ಜಿ.ಎಸ್. ಮಣಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ನವದೆಹಲಿ: ತಮಿಳುನಾಡಿನಲ್ಲಿ ತ್ರಿಭಾಷಾ ನೀತಿ ಜಾರಿ ವಿರುದ್ಧ ಆಕ್ರೋಶ ಭುಗಿಲೆದ್ದಿರುವ ನಡುವೆಯೇ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅದರ ತ್ರಿಭಾಷಾ ಪಠ್ಯಕ್ರಮದೊಂದಿಗೆ ಜಾರಿಗೆ ತರಲು ಆದೇಶ ನೀಡುವಂತೆ ಕೋರಿ ತಮಿಳುನಾಡಿನ ವಕೀಲ, ರಾಜ್ಯ ಬಿಜೆಪಿ ಕಾನೂನು ಕೋಶದ ಮುಖ್ಯಸ್ಥ ಜಿ.ಎಸ್. ಮಣಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಕುರಿತು ಅರ್ಜಿ ಸಲ್ಲಿಸಿರುವ ಅವರು, ‘ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ. ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಹಿಂದಿ ಹೇರಿಕೆಯ ಸುಳ್ಳು ಆರೋಪ ಮಾಡಿ, ರಾಜಕೀಯ ಕಾರಣಗಳಿಗಾಗಿ ಈ ಯೋಜನೆಯನ್ನು ವಿರೋಧಿಸುತ್ತಿವೆ’ ಎಂದು ವಾದಿಸಿದ್ದಾರೆ.ಕಳೆದ ವಾರವಷ್ಟೆ ತಮಿಳುನಾಡಿನಾದ್ಯಂತ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯ ವಿರುದ್ಧ ಆಕ್ರೋಶ ಹೊರಹಾಕಿ, ತ್ರಿಭಾಷಾ ಸೂತ್ರಕ್ಕೆ ಒತ್ತಾಯವು ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.