ಸಾರಾಂಶ
ಬಾಂಗ್ಲಾದೇಶದ ವಿವಿಗಳಲ್ಲಿ ಕಲಿಯುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಗಳಲ್ಲಿ ಭಾರತ ವಿರೋಧಿ ಮನಸ್ಥಿತಿ ಬಿತ್ತಿ ತಮ್ಮತ್ತ ಸೆಳೆಯುವ ತಂತ್ರವನ್ನು ಲಷ್ಕರ್- ಎ- ತೊಯ್ಬಾ ಮತ್ತು ಜೈಷ್- ಎ - ಮೊಹಮ್ಮದ್ ಸಂಘಟನೆಗಳು ರೂಪಿಸಿವೆ
ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕರು ಅದೆಷ್ಟೇ ಪೆಟ್ಟು ತಿಂದರೂ ತಮ್ಮ ಬುದ್ಧಿ ಮಾತ್ರ ಬಿಡುವಂತೆ ಕಾಣುತ್ತಿಲ್ಲ. ಅದಕ್ಕೆ ಸಾಕ್ಷಿಯೆನ್ನುವಂತೆ ಬಾಂಗ್ಲಾದೇಶದ ವಿವಿಗಳಲ್ಲಿ ಕಲಿಯುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಗಳಲ್ಲಿ ಭಾರತ ವಿರೋಧಿ ಮನಸ್ಥಿತಿ ಬಿತ್ತಿ ತಮ್ಮತ್ತ ಸೆಳೆಯುವ ತಂತ್ರವನ್ನು ಲಷ್ಕರ್- ಎ- ತೊಯ್ಬಾ ಮತ್ತು ಜೈಷ್- ಎ - ಮೊಹಮ್ಮದ್ ಸಂಘಟನೆಗಳು ರೂಪಿಸಿವೆ ಎಂದು ವರದಿಯಾಗಿದೆ.
ಈ ಸಂಘಟನೆಗಳ ಉಗ್ರರು ಬಾಂಗ್ಲಾದೇಶ ಪ್ರವೇಶಿಸಿದ್ದಾರೆ. ಅಲ್ಲಿ ಕಲಿಯುತ್ತಿರುವ ಭಾರತೀಯ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಲ್ಲಿನ ಜಮಾತ್-ಇ- ಇಸ್ಲಾಮಿ ಸೇರಿದಂತೆ ಕೆಲ ಸಂಘಟನೆಗಳು ಕೂಡ ಸಾಥ್ ನೀಡಿದ್ದು ಅವು ಎಲ್ಇಟಿ, ಜೈಷ್ ಉಗ್ರ ಸಂಘಟನೆಗಳಿಗೆ ವಿವಿಗಳ ಕ್ಯಾಂಪಸ್‌ನಲ್ಲಿ ನೆರವಾಗುತ್ತಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಲಷ್ಕರ್ ಸಂಘಟನೆ ಬಾಂಗ್ಲಾದ ಜಮಾತ್‌ನ ವಿದ್ಯಾರ್ಥಿ ಸಂಘಟನೆ ಇಸ್ಲಾಮಿ ಛಾತ್ರ ಶಿಬಿರದ ನೆರವಿನೊಂದಿಗೆ ವಿವಿಯಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ವಿವಿಗಳ ಸನಿಹದಲ್ಲಿ ಹರ್ಕತ್- ಉಲ್- ಜಿಹಾದ್- ಅಲ್- ಇಸ್ಲಾಮಿ, ಜಮಾತ್- ಉಲ್- ಮುಜಾಹಿದ್ದೀನ್ ನಂತಹ ಸಂಘಟನೆಗಳು ಮದರಸಾ ಉಸ್ತುವಾರಿ ಹೊತ್ತಿವೆ. ಇಲ್ಲಿ ಇಸ್ಲಾಮಿಕ್ ಅಧ್ಯಯನ ಮಾಡಲು ಭಾರತೀಯ ಮುಸ್ಲಿಂ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಿವೆ. ಅಲ್ಲಿ ಧಾರ್ಮಿಕ ವಿಚಾರದ ಬಗ್ಗೆ ಚರ್ಚೆ ಮಾಡಲು ಲಷ್ಕರ್‌ನ ವಿಡಿಯೋಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ, ಅವರಲ್ಲಿ ಉಗ್ರತ್ವದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುವಂತೆ ಮಾಡಲಾಗುತ್ತದೆ.
ಭಾರತ ವಿರೋಧಿ ಮನಸ್ಥಿತಿ ಸೃಷ್ಟಿ :ಬಾಂಗ್ಲಾದಲ್ಲಿ ಕಲಿಯುತ್ತಿರುವ ಭಾರತೀಯ ಮುಸ್ಲಿಂ ವಿದ್ಯಾರ್ಥಿಗಳಿಗೆ ಭಾರತದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಬರುವ ರೀತಿಯಲ್ಲಿ ಪಾಕ್ ಉಗ್ರ ಸಂಘಟನೆಗಳು ತಮ್ಮ ಜಾಲ ವಿಸ್ತರಿಸಿದ್ದು, ಭಾರತದಿಂದ ಕೊಲ್ಲಲ್ಪಟ್ಟ ಉಗ್ರರನ್ನು ಹುತಾತ್ಮರೆಂದು ಢಾಕಾ ವಿವಿ ವೈಭವೀಕರಿಸಿದ್ದೇ ಇದಕ್ಕೆ ಸಾಕ್ಷಿ. ಮಾತ್ರವಲ್ಲದೇ ಪಹಲ್ಗಾಂ ದಾಳಿಯಂತಹ ಘಟನೆಗಳ ವಿಡಿಯೋವನ್ನು ಭಾರತದ ವಿರೋಧಿಯಾಗಿ ಪ್ರದರ್ಶಿಸಲಾಗಿದೆ ಎಂದು ವರದಿಯಾಗಿದೆ.
ಮಾತ್ರವಲ್ಲದೇ ಸಿದ್ಧಾಂತ ಒಪ್ಪಿ ಮೂಲಭೂತವಾದಿಗಳಾಗಿ ಬದಲಾಗುವ ಭಾರತೀಯ ವಿದ್ಯಾರ್ಥಿಗಳನ್ನು ಬಾಂಗ್ಲಾದ ಮೂಲಕ ಲಷ್ಕರ್ ಸಂಘಟನೆಯು ಮ್ಯಾನ್ಮಾರ್ ಅಥವಾ ನೇಪಾಳದ ಮಾರ್ಗವಾಗಿ ಪಾಕಿಸ್ತಾನದ ತನ್ನ ಶಿಬಿರಗಳಿಗೆ ಕಳುಹಿಸುತ್ತದೆ. ಆಗಾಗ ಭಾರತದಲ್ಲಿ ಮುಸ್ಲಿಮರ ದಬ್ಬಾಳಿಕೆ ನಡೆಯುತ್ತಿದೆ ಎನ್ನುವ ಮೂಲಕ ಜಿಹಾದಿ ಮನಸ್ಥಿತಿ ಹೇರಲು ಯತ್ನಿಸುತ್ತಿದೆ.
ಇದರ ಜೊತೆಗೆ ಆರ್ಥಿಕವಾಗಿ ಸೆಳೆಯುವ ಉಗ್ರರು ಆರ್ಥಿಕವಾಗಿ ದುರ್ಬಲರಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ತನ್ನತ್ತ ಸೆಳೆಯುವ ತಂತ್ರ ರೂಪಿಸಿದೆ. ಈ ರೀತಿ ಹಂತ ತಂತವಾಗಿ ತಂತ್ರ ರೂಪಿಸಿ ಭಾರತೀಯರನ್ನೇ ತನ್ನ ದೇಶದ ಮೇಲೆ ದ್ವೇಷ ಸಾಧಿಸುವಂತೆ ಮಾಡುವ ದುಷ್ಕೃತ್ಯಕ್ಕೆ ಪಾಕ್ ಮುಂದಾಗಿದೆ.
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))