ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಕಾಂಗ್ರೆಸ್‌ ಸದಸ್ಯರ ಹಕ್ಕುಚ್ಯುತಿ ನಿಲುವಳಿ ಮಂಡನೆಗೆ ನೋಟಿಸ್‌

| Published : Aug 01 2024, 12:19 AM IST / Updated: Aug 01 2024, 08:14 AM IST

PM Narendra Modi
ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಕಾಂಗ್ರೆಸ್‌ ಸದಸ್ಯರ ಹಕ್ಕುಚ್ಯುತಿ ನಿಲುವಳಿ ಮಂಡನೆಗೆ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರ ಜಾತಿಯ ಬಗ್ಗೆ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಮಂಗಳವಾರ ಲೋಕಸಭೆಯಲ್ಲಿ ಆಡಿದ್ದ ಆಕ್ಷೇಪಾರ್ಹ ಮಾತಿನ ಹಿನ್ನೆಲೆಯಲ್ಲಿ ಬುಧವಾರ ಸದನದಲ್ಲಿ ತೀವ್ರ ಕೋಲಾಹಲ ಉಂಟಾಗಿದೆ.

 ನವದೆಹಲಿ : ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರ ಜಾತಿಯ ಬಗ್ಗೆ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಮಂಗಳವಾರ ಲೋಕಸಭೆಯಲ್ಲಿ ಆಡಿದ್ದ ಆಕ್ಷೇಪಾರ್ಹ ಮಾತಿನ ಹಿನ್ನೆಲೆಯಲ್ಲಿ ಬುಧವಾರ ಸದನದಲ್ಲಿ ತೀವ್ರ ಕೋಲಾಹಲ ಉಂಟಾಗಿದೆ. ಅಪರೂಪದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ನೋಟಿಸ್‌ ನೀಡಿದ್ದಾರೆ.

ಇದೇ ವೇಳೆ, ವಿಪಕ್ಷಗಳ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಸದನ ಅರ್ಧ ದಿನ ಮುಂದೂಡಿಕೆ ಕೂಡ ಕಂಡಿದೆ. ಈ ನಡುವೆ, ಅನುರಾಗ್‌ ಠಾಕೂರ್‌ ಆಡಿದ ಮಾತಿನಲ್ಲಿ ತಪ್ಪೇನಿದೆ? ರಾಹುಲ್‌ ಗಾಂಧಿಯೇ ಎಲ್ಲರ ಜಾತಿ ಕೇಳುತ್ತಿರುತ್ತಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಮೋದಿ ವಿರುದ್ಧ ನಿಲುವಳಿ ನೋಟಿಸ್‌:

ಅನುರಾಗ್‌ ಠಾಕೂರ್‌ ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿ, ‘ತಮ್ಮ ಜಾತಿ ಯಾವುದೆಂದೇ ಗೊತ್ತಿಲ್ಲದ ರಾಹುಲ್‌ ಗಾಂಧಿ, ಜಾತಿ ಗಣತಿ ಬಗ್ಗೆ ಕೇಳುತ್ತಿದ್ದಾರೆ’ ಎಂದಿದ್ದರು. ಅವರ ಮಾತುಗಳಲ್ಲಿ ಕೆಲ ಆಕ್ಷೇಪಾರ್ಹ ಪದಗಳನ್ನು ಸ್ಪೀಕರ್‌ ಕಡತದಿಂದ ತೆಗೆದಿದ್ದರು. ಆದರೆ, ಆ ಪದಗಳು ಕೂಡ ಇರುವ ಸಂಸತ್‌ ಟೀವಿ ಚಾನೆಲ್‌ನ ಮೂಲ ವಿಡಿಯೋವನ್ನು ಪ್ರಧಾನಿ ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್‌ (ಟ್ವೀಟ್‌) ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸದನದ 222ನೇ ನಡಾವಳಿಯ ಪ್ರಕಾರ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ಕಾಂಗ್ರೆಸ್‌ನ ದಲಿತ ಸಂಸದ ಚರಣ್‌ಜಿತ್‌ ಚೆನ್ನಿ ಬುಧವಾರ ಸ್ಪೀಕರ್‌ಗೆ ನೋಟಿಸ್‌ ನೀಡಿದರು.

‘ಕಡತದಿಂದ ಯಾವುದೇ ಪದವನ್ನು ತೆಗೆದುಹಾಕಿದರೆ ಆ ಪದವನ್ನು ಸಂಸದರು ಸದನದಲ್ಲಿ ಆಡಿಲ್ಲವೆಂದೇ ಅರ್ಥ. ಇದನ್ನು ಸುಪ್ರೀಂಕೋರ್ಟ್‌ ಕೂಡ ಹೇಳಿದೆ. ಆದರೂ ಆ ಪದಗಳನ್ನು ಪ್ರಧಾನಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಹಕ್ಕುಚ್ಯುತಿ ಉಂಟುಮಾಡಿದ್ದಾರೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಸದನ ಅರ್ಧ ದಿನ ಮುಂದೂಡಿಕೆ:

ಇದೇ ವೇಳೆ ಕಾಂಗ್ರೆಸ್‌, ಡಿಎಂಕೆ, ಸಮಾಜವಾದಿ ಪಾರ್ಟಿ ಹಾಗೂ ಶಿವಸೇನೆ (ಉದ್ಧವ್‌ ಬಣ) ಸಂಸದರು ಸದನದ ಬಾವಿಗಿಳಿದು ಠಾಕೂರ್‌ ಮಾತಿನ ವಿರುದ್ಧ ಪ್ರತಿಭಟಿಸಿದರು. ಅದು ಹತೋಟಿಗೆ ಬಾರದಿದ್ದರಿಂದ ಸ್ಪೀಕರ್‌ ಓಂ ಬಿರ್ಲಾ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.ಠಾಕೂರ್ ಮಾತಿಗೆ ಸಮರ್ಥನೆ:

‘ಅನುರಾಗ್‌ ಠಾಕೂರ್‌ ಆಡಿದ ಮಾತಿನಲ್ಲಿ ತಪ್ಪೇನೂ ಇಲ್ಲ. ರಾಹುಲ್‌ ಗಾಂಧಿಯವರು ಜಾತಿಯ ಆಧಾರದಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನವನ್ನೇ ಯಾವಾಗಲೂ ಮಾಡುತ್ತಿರುತ್ತಾರೆ. ಹೀಗಿರುವಾಗ ಅವರ ಜಾತಿ ಕೇಳಿದರೆ ತಪ್ಪೇನು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಸಂಸತ್‌ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷ ಇಡೀ ದಿನ ಜಾತಿ ಬಗ್ಗೆಯೇ ಮಾತನಾಡುತ್ತದೆ. ರಾಹುಲ್‌ ಗಾಂಧಿ ಪತ್ರಕರ್ತರನ್ನು ಭೇಟಿಯಾದಾಗ ಅವರ ಜಾತಿ ಕೇಳುತ್ತಾರೆ. ಸಶಸ್ತ್ರ ಪಡೆಗಳ ಯೋಧರ ಬಳಿ ಜಾತಿ ಕೇಳುತ್ತಾರೆ. ಭಾರತ್‌ ಜೋಡೋ ಯಾತ್ರೆ ವೇಳೆಯೂ ಜಾತಿ ಕೇಳುತ್ತಾರೆ. ಅವರು ಯಾರ ಜಾತಿಯನ್ನು ಬೇಕಾದರೂ ಕೇಳಬಹುದು, ಆದರೆ ಅವರ ಜಾತಿಯನ್ನು ಯಾರೂ ಕೇಳಬಾರದು ಎಂದರೆ ಏನು ಅರ್ಥ’ ಎಂದು ರಿಜಿಜು ತಿವಿದರು.

ಮೋದಿ ಗಂಭೀರ ಲೋಪ-ಕಾಂಗ್ರೆಸ್‌:

ಅನುರಾಗ್‌ ಠಾಕೂರ್‌ ಅವರ ವಿಡಿಯೋವನ್ನು ಪ್ರಧಾನಿ ಮೋದಿ ‘ಇದನ್ನು ಎಲ್ಲರೂ ಕೇಳಲೇಬೇಕು’ ಎಂಬ ಒಕ್ಕಣೆಯೊಂದಿಗೆ ಪೋಸ್ಟ್‌ ಮಾಡಿದ್ದನ್ನು ಟ್ಯಾಗ್‌ ಮಾಡಿ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಠಾಕೂರ್‌ ಆಡಿದ ಮಾತು ಅತ್ಯಂತ ಆಕ್ಷೇಪಾರ್ಹ ಹಾಗೂ ಅಸಂವಿಧಾನಿಕವಾಗಿದೆ. ಇದನ್ನು ಅನುಮೋದಿಸುವ ಮೂಲಕ ಮೋದಿ ಗಂಭೀರ ಲೋಪವೆಸಗಿ ಸಂಸದರ ಹಕ್ಕಿಗೆ ಚ್ಯುತಿ ತಂದಿದ್ದಾರೆ. ಕಡತದಿಂದ ತೆಗೆದುಹಾಕಿದ ಪದಗಳನ್ನು ಹಾಗೇ ಇರಿಸಿ ‘ಸಂಸತ್‌ ಟೀವಿ’ ಕೂಡ ವಿಡಿಯೋ ಅಪ್ಲೋಡ್‌ ಮಾಡಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.: