ಸಾರಾಂಶ
ನವದೆಹಲಿ: ಅನಿಲ್ ಕಪೂರ್, ದೇವ್ ಪಟೇಲ್, ಫ್ರೀಡಾ ಪಿಂಟೋ ಅಭಿನಯದ ಆಸ್ಕರ್ ಪ್ರಶಸ್ತಿ ಪುರಸ್ಕೃತ ‘ಸ್ಲಂ ಡಾಗ್ ಮಿಲಿನಿಯರ್’ ಚಿತ್ರದ ಪಾರ್ಟ್ 2 ಶೀಘ್ರದಲ್ಲೇ ಬರಲಿದೆ. ಚಿತ್ರವನ್ನು ನಿರ್ಮಾಪಕಿ ಸ್ವಾತಿ ಶೆಟ್ಟಿ ಹಾಗೂ ಗ್ರಾಂಟ್ ಕೆಸ್ಮನ್ ನಿರ್ಮಿಸಲಿದ್ದಾರೆ. ಸ್ಲಂ ಡಾಗ್ ಮಿಲಿಯನೇರ್ ಚಿತ್ರ 2008ರಲ್ಲಿ ತೆರೆ ಕಂಡಿತ್ತು. ವಿಕಾಸ್ ಸ್ವರೂಪ್ ಅವರ ಕ್ಯು ಮತ್ತು ಎ ಕಾದಂಬರಿ ಆಧಾರಿದ ಚಿತ್ರ ಇದಾಗಿದ್ದು, ಮುಂಬೈನ ಸ್ಲಂನಲ್ಲಿ ಜೀವನ ನಡೆಸುವ 18 ವರ್ಷದ ಯುವಕನೊಬ್ಬನ ಕತೆಯಾಗಿದೆ. ಈ ಚಿತ್ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಾಹಕ ಸೇರಿದಂತೆ ಅನೇಕ ಪ್ರಶಸ್ತಿ ಪಡೆದುಕೊಂಡಿತ್ತು.
ಉಕ್ರೇನ್ ಮೇಲೆ ರಷ್ಯಾದಿಂದ 200 ಕ್ಷಿಪಣಿ ದಾಳಿ:10 ಲಕ್ಷ ಮನೆಗಳಿಗೆ ವಿದ್ಯುತ್ ಕಟ್
ಕೀವ್: ಎರಡು ದಿನಗಳ ಹಿಂದಷ್ಟೇ 150ಕ್ಕೂ ಹೆಚ್ಚು ಡ್ರೋನ್ ಬಳಸಿ ಉಕ್ರೇನ್ ಮೇಲೆ ಭೀಕರ ವಾಯುದಾಳಿ ನಡೆಸಿದ್ದ ರಷ್ಯಾ ವಾಯುಪಡೆ, ಬುಧವಾರ ಉಕ್ರೇನ್‌ನ ಇಂಧನ ಮೂಲ ಸೌಕರ್ಯಯವನ್ನು ಗುರಿಯಾಗಿಸಿಕೊಂಡು ಸುಮಾರು 200 ಕ್ಷಿಪಣಿಗಳು ಮತ್ತು ಡ್ರೋನ್ ದಾಳಿ ನಡೆಸಿದೆ. ಪರಿಣಾಮ ಬೃಹತ್ ಪ್ರಮಾಣದ ದಾಳಿಯಿಂದ ಉಕ್ರೇನ್‌ನಲ್ಲಿ 10ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ‘ಉಕ್ರೇನ್‌ನಾದ್ಯಂತ ಇಂಧನ ಸೌಲಭ್ಯಗಳ ಮೇಲೆ ದಾಳಿಗಳು ನಡೆಯುತ್ತಿವೆ. ದೇಶಾದ್ಯಂತ ತುರ್ತು ವಿದ್ಯುತ್ ನಿಲುಗಡೆ ಜಾರಿಗೊಳಿಸಲಾಗಿದೆ’ಎಂದು ಉಕ್ರೇನ್‌ನ ಇಂಧನ ಸಚಿವ ಹರ್ಮನ್ ಹಲುಶ್ಚೆಂಕೊ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.==
1190 ಅಂಕ ಕುಸಿತ ಕಂಡ ಸೆನ್ಸೆಕ್ಸ್ 79043ಕ್ಕೆ ಅಂತ್ಯ: ₹1.50 ಲಕ್ಷ ಕೋಟಿ ನಷ್ಟ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ 1190 ಅಂಕಗಳ ಭಾರೀ ಕುಸಿತ ಕಂಡು79043ರಲ್ಲಿ ಅಂತ್ಯವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 360 ಅಂಕ ಕುಸಿದು 23914ರಲ್ಲಿ ಅಂತ್ಯವಾಯಿತು. ಜಾಗತಿಕ ಷೇರುಪೇಟೆಗಳ ಮಿಶ್ರ ಸುಳಿವು, ಜಾಗತಿಕ ಸಂಘರ್ಷ ರಿಲಯನ್ಸ್, ಎಚ್‌ಡಿಎಫ್‌ಸಿ, ಇನ್ಫೋಸಿಸ್ ಮೊದಲಾದ ಷೇರುಗಳ ಕುಸಿತ ಸೂಚ್ಯಂಕ ಭಾರೀ ಕುಸಿತ ಕಾಣುವಂತೆ ಮಾಡಿತು. ಆದರೆ ಅಮೆರಿಕದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅದಾನಿ ಸಮೂಹದ ಎಲ್ಲಾ 11 ಕಂಪನಿಗಳ ಷೇರುಮೌಲ್ಯವೂ ಗುರುವಾರ ಉತ್ತಮ ಏರಿಕೆ ಕಂಡಿತು. ಗುರುವಾರದ ಷೇರುಪೇಟೆ ಕುಸಿತ ಹೂಡಿಕೆದಾರರ ಸಂಪತ್ತನ್ನು 1.50 ಲಕ್ಷ ಕೋಟಿ ರು.ನಷ್ಟು ಕರಗಿಸಿದೆ.
ಅಣ್ವಸ್ತ್ರ ಸಿಡಿತಲೆ ದಾಳಿ ನಡೆಸಬಲ್ಲ ಕೆ4 ಕ್ಷಿಪಣಿ ಸಬ್‌ಮರೀನಿಂದ ಪರೀಕ್ಷೆ
ನವದೆಹಲಿ: ಅಣ್ವಸ್ತ್ರ ಸಿಡಿತಲೆ ಹೊತ್ತು ದಾಳಿ ನಡೆಸಬಲ್ಲ ಕೆ4 ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಭಾರತೀಯ ನೌಕಾಪಡೆ ಗುರುವಾರ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಇತ್ತೀಚೆಗೆ ನೌಕಾಪಡೆಗೆ ಸೇರ್ಪಡೆಯಾಗಿದ್ದ ಪರಮಾಣು ಇಂಧನ ಚಾಲಿತ ಜಲಾಂತರ್ಗಾಮಿ ಐಎನ್‌ಎಸ್ ಅರಿಘಾಟ್ ಮೂಲಕ ಈ ಪರೀಕ್ಷೆ ನಡೆಸಲಾಗಿದೆ.
3,500 ಕಿ.ಮೀ. ದೂರದ ಗುರಿಯನ್ನು ಮುಟ್ಟಬಲ್ಲ ಕ್ಷಿಇಪಣಿಯನ್ನು ಬಂಗಾಳ ಕೊಲ್ಲಿಯಲ್ಲಿ ಪ್ರಯೋಗಿಸಲಾಗಿದೆ. ಇದು ಭಾರತೀಯ ಸೇನೆಯ ಪರಮಾಣು ದಾಳಿ ತಡೆಯಬಲ್ಲ ಮತ್ತು ಮರುದಾಳಿ ನಡೆಸುವ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಈ ವರ್ಷ ವಿಮಾನಗಳಿಗೆ 994 ಹುಸಿಬಾಂಬ್ ಬೆದರಿಕೆ: ಸಾವಿರಾರು ಕೋಟಿ ರು. ನಷ್ಟ
ನವದೆಹಲಿ: ಈ ವರ್ಷದ ಜ.1ರಿಂದ ನ.13ರವರೆಗೆ ವಿವಿಧ ವಿಮಾನಯಾನ ಸಂಸ್ಥೆಗಳು 994 ಹುಸಿಬಾಂಬ್ ಬೆದರಿಕೆ ಕರೆ ಸ್ವೀಕರಿಸಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ‘ಆಗಸ್ಟ್ 2022ರಿಂದ ಈ ವರ್ಷದ ನ.13ರ ತನಕ ವಿಮಾನಗಳಿಗೆ 1,134 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದೆ. ಈ ಪೈಕಿ 2024ರ ಜ.1ರಿಂದ ನ.13ರ ನಡುವೆ 994 ಬೆದರಿಕೆ ಕರೆಗಳು ಬಂದಿವೆ’ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರುಳೀಧರ್ ಮೋಹಲ್ ಮಾಹಿತಿ ನೀಡಿದ್ದಾರೆ. ಒಂದು ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆಗಳ ಕಾರಣಕ್ಕೆ ಸಂಚಾರ ರದ್ದಾದರೆ, ಲ್ಯಾಂಡಿಂಗ್, ಪ್ರಯಾಣಿಕರ ವಸತಿ, ವಿಮಾನ ಗ್ರೌಂಡಿಂಗ್ ಮತ್ತು ಸಿಬ್ಬಂದಿ ಬದಲಿಗೆ ವಿಮಾನಯಾನ ಸಂಸ್ಥೆಗಳಿಗೆ 3 ಕೋಟಿ ರು. ವೆಚ್ಚ ತಗುಲುತ್ತದೆ.