ನವದೆಹಲಿ : ‘ಒಂದು ದೇಶ, ಒಂದು ಚುನಾವಣೆ’ ಕುರಿತ 2 ಮಸೂದೆ ಮಂಡನೆಯನ್ನು ಮುಂದೂಡಿದ ಸರ್ಕಾರ

| Published : Dec 16 2024, 12:48 AM IST / Updated: Dec 16 2024, 05:44 AM IST

ಸಾರಾಂಶ

ಡಿ.16ರ ಸೋಮವಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿದ್ದ ‘ಒಂದು ದೇಶ, ಒಂದು ಚುನಾವಣೆ’ ಕುರಿತ 2 ಮಸೂದೆ ಮಂಡನೆಯನ್ನು ಸರ್ಕಾರ ಮುಂದೂಡಿದೆ. ಅದನ್ನು ಸೋಮವಾರದ ಬದಲಿಗೆ ವಾರಾಂತ್ಯದ ವೇಳೆಗೆ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

 ನವದೆಹಲಿ : ಡಿ.16ರ ಸೋಮವಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿದ್ದ ‘ಒಂದು ದೇಶ, ಒಂದು ಚುನಾವಣೆ’ ಕುರಿತ 2 ಮಸೂದೆ ಮಂಡನೆಯನ್ನು ಸರ್ಕಾರ ಮುಂದೂಡಿದೆ. ಅದನ್ನು ಸೋಮವಾರದ ಬದಲಿಗೆ ವಾರಾಂತ್ಯದ ವೇಳೆಗೆ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲಿನ ನಿರ್ಧಾರದ ಪ್ರಕಾರ, ಸಂಸತ್‌ ಹಾಗೂ ವಿಧಾನಸಭೆಗೆ ದೇಶವ್ಯಾಪಿ ಒಮ್ಮೆಲೆ ಚುನಾವಣೆ ನಡೆಸಲು ಅವಕಾಶ ನೀಡುವ 2 ಮಸೂದೆಗಳನ್ನು (ಸಂವಿಧಾನದ 129ನೇ ತಿದ್ದುಪಡಿ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂವಿಧಾನ ತಿದ್ದುಪಡಿ ಮಸೂದೆ) ಸೋಮವಾರ ಮಂಡಿಸಲು ನಿರ್ಧರಿಸಲಾಗಿತ್ತು. ಬಳಿಕ ಅದನ್ನು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಒಳಪಡಿಸುವುದೆಂದು ಹೇಳಲಾಗಿತ್ತು.

ಆದರೆ ಕಡೆಯ ಹಂತದ ಬದಲಾವಣೆಗಳ ಅನ್ವಯ, ಮೊದಲಿಗೆ ಪೂರಕ ಅಂದಾಜು ಕುರಿತ ಚಟುವಟಿಕೆ ಪೂರ್ಣಗೊಳಿಸಿ ಬಳಿಕ ಏಕ ಚುನಾವಣೆ ಮಸೂದೆ ಮಂಡನೆಗೆ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸೋಮವಾರದ ಕಲಾಪ ಪಟ್ಟಿಯಿಂದ ಏಕ ಚುನಾವಣೆಯ ಎರಡೂ ವಿಧೇಯಕಗಳನ್ನು ಕೈಬಿಡಲಾಗಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಡಿ.20ರವರೆಗೂ ನಡೆಯಲಿದೆ. ಅಂದರೆ ಬಹುಶಃ ಶುಕ್ರವಾರದ ಒಳಗೆ ಇದು ಮಂಡನೆ ಆಗುವ ಸಾಧ್ಯತೆ ಇದೆ. ‘ಕೇಂದ್ರ ಸರ್ಕಾರಕ್ಕೆ ತಕ್ಷಣಕ್ಕೆ ಅಂಗೀಕಾರದ ಉದ್ದೇಶ ಇಲ್ಲ. ಬದಲಾಗಿ ಸ್ಥಾಯಿ ಸಮಿತಿಗೆ ಕಳಿಸುವ ಇರಾದೆ ಇರುವ ಕಾರಣ ಮಂಡನೆ ತರಾತುರಿ ಮಾಡುತ್ತಿಲ್ಲ’ ಎಂದು ಮೂಲಗಳು ಹೇಳಿವೆ.