ದೇಶದ ಖ್ಯಾತ ಉದ್ಯಮಿಗಳ ನೆಲವಾಗಿರುವ ಗುಜರಾತ್‌ನ ಕಚ್ಚ್‌ನಲ್ಲಿರುವ ಮಧಾಪುರ ಗ್ರಾಮ ಏಷ್ಯಾ ಖಂಡದಲ್ಲೇ ಅತಿ ಶ್ರೀಮಂತ ಗ್ರಾಮವೆಂಬ ಖ್ಯಾತಿ ಗಳಿಸಿದೆ.

ಗಾಂಧಿನಗರ: ದೇಶದ ಖ್ಯಾತ ಉದ್ಯಮಿಗಳ ನೆಲವಾಗಿರುವ ಗುಜರಾತ್‌ನ ಕಚ್ಚ್‌ನಲ್ಲಿರುವ ಮಧಾಪುರ ಗ್ರಾಮ ಏಷ್ಯಾ ಖಂಡದಲ್ಲೇ ಅತಿ ಶ್ರೀಮಂತ ಗ್ರಾಮವೆಂಬ ಖ್ಯಾತಿ ಗಳಿಸಿದೆ. ಇದಕ್ಕೆ ಅಲ್ಲಿನ ಜನ ತಮ್ಮ ಬ್ಯಾಂಕ್‌ ಖಾತೆಗಳಲ್ಲಿ ಇಟ್ಟಿರುವ 7000 ಕೋಟಿ ರು. ಠೇವಣಿಯೇ ಸಾಕ್ಷಿ.

ಮಧಾಪುರದಲ್ಲಿರುವ ಬಹುತೇಕರು ಪಟೇಲ ಸಮುದಾಯಕ್ಕೆ ಸೇರಿದ್ದು, 2011ರಲ್ಲಿ 17,000 ಇದ್ದ ಜನಸಂಖ್ಯೆ ಈಗ 32,000 ತಲುಪಿದೆ. ಗ್ರಾಮದಲ್ಲಿ ಸುಮಾರು 20,000 ಮನೆಗಳಿದ್ದು, ಈ ಪೈಕಿ 1,200 ಪರಿವಾರಗಳು ವಿದೇಶಗಳಲ್ಲಿ, ಮುಖ್ಯವಾಗಿ ಆಫ್ರಿಕನ್‌ ದೇಶಗಳಲ್ಲಿ ವಾಸವಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಗ್ರಾಮದ ಬಹುತೇಕರು ಅನಿವಾಸಿ ಭಾರತೀಯರಾಗಿದ್ದು, ಪ್ರತೀ ವರ್ಷ ಇಲ್ಲಿನ ಸ್ಥಳೀಯ ಬ್ಯಾಂಕು ಹಾಗೂ ಅಂಚೆ ಕಚೇರಿಗಳಲ್ಲಿ ಕೋಟಿಗಟ್ಟಲೆ ಠೇವಣಿಯಿಡುತ್ತಾರೆ.

ದೇಶದ ಪ್ರಮುಖ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ, ಸ್ಟೇಟ್‌ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌ ಸೇರಿದಂತೆ ಒಟ್ಟು 17 ಬ್ಯಾಂಕುಗಳು ಈ ಗ್ರಾಮದಲ್ಲಿವೆ ಹಾಗೂ ಇನ್ನೂ ಕೆಲ ಬ್ಯಾಂಕ್‌ಗಳು ಇಲ್ಲಿ ತಮ್ಮ ಶಾಖೆ ತೆರೆಯಲು ಬಯಸುತ್ತಿವೆ.