ಹೆಂಡತಿಯ ಪ್ರೇಮ ಸಂಬಂಧವು ವ್ಯಭಿಚಾರವಲ್ಲ : ಮಧ್ಯಪ್ರದೇಶ ಹೈಕೋರ್ಟ್‌ ಮಹತ್ವದ ತೀರ್ಪು

| N/A | Published : Feb 15 2025, 12:31 AM IST / Updated: Feb 15 2025, 04:24 AM IST

ಸಾರಾಂಶ

ದೈಹಿಕ ಸಂಬಂಧವಿಲ್ಲದೆ ಹೆಂಡತಿಯು ಮತ್ತೊಬ್ಬನ ಜತೆ ಹೊಂದಿರುವ ಪ್ರೇಮ ಬಾಂಧವ್ಯ ಅಥವಾ ಭಾವನಾತ್ಮಕ ಬಾಂಧವ್ಯವು ಕಾನೂನು ಪ್ರಕಾರ ವ್ಯಭಿಚಾರ ಆಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಭೋಪಾಲ್‌: ದೈಹಿಕ ಸಂಬಂಧವಿಲ್ಲದೆ ಹೆಂಡತಿಯು ಮತ್ತೊಬ್ಬನ ಜತೆ ಹೊಂದಿರುವ ಪ್ರೇಮ ಬಾಂಧವ್ಯ ಅಥವಾ ಭಾವನಾತ್ಮಕ ಬಾಂಧವ್ಯವು ಕಾನೂನು ಪ್ರಕಾರ ವ್ಯಭಿಚಾರ ಆಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಛಿಂದ್ವಾಡದ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಗೆ 4000 ರು. ಮಧ್ಯಂತರ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಅರ್ಜಿ ಸಲ್ಲಿಸಿದ್ದ. ಆತನ ಅರ್ಜಿ ವಜಾ ಮಾಡಿದ ಹೈಕೋರ್ಟ್‌ ಈ ತೀರ್ಪು ನೀಡಿದೆ.

ವಿಚಾರಣೆ ವೇಳೆ ಜೀವನಾಂಶ ಆದೇಶವನ್ನು ಪ್ರಶ್ನಸಿ ವಾದ ಮಂಡಿಸಿದ್ದ ಪತಿ, ತನ್ನ ಆದಾಯವೇ ಮಾಸಿಕ 8 ಸಾವಿರ ರು. ಇದೆ. ಹೀಗಾಗಿ ಜೀವನಾಂಶ ಮೊತ್ತ ಅಧಿಕವಾಗಿದೆ. ಇನ್ನು ಪತ್ನಿಯು ಬೇರೆ ವ್ಯಕ್ತಿ ಜತೆ ಪ್ರೇಮ ಸಂಬಂಧ ಹೊಂದಿದ್ದಳು. ಹೀಗಾಗಿ ಆಕೆ ಜೀವನಾಂಶಕ್ಕೆ ಅರ್ಹಳಲ್ಲ ಎಂದು ವಾದಿಸಿದ್ದ.

ಆದರೆ ಆತನ ವಾದ ತಿರಸ್ಕರಿಸಿದ ಕೋರ್ಟ್‌, ದೈಹಿಕ ಸಂಬಂಧವಿಲ್ಲದ ಪ್ರೇಮ ಸಂಬಂಧವನ್ನು ವ್ಯಭಿಚಾರ ಎನ್ನಲಾಗದು ಎಂದು ಹೇಳಿದೆ.