ಸಾರಾಂಶ
ಸನಾತನ ಧರ್ಮವನ್ನು ರೋಗಕ್ಕೆ ಹೋಲಿಸುವುದು ಅಸಾಂವಿಧಾನಿಕ. ಸಾಂವಿಧಾನಿಕ ಹುದ್ದೆಗಳಲ್ಲಿರುವ ಧರ್ಮ ವಿಭಜಕ ಹೇಳಿಕೆ ನೀಡಬಾರದು ಎಂದು ಉದಯನಿಧಿ ಸ್ಟಾಲಿನ್ ಅವರಿಗೆ ಮದ್ರಾಸ್ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಆದರೆ ಶಿಕ್ಷೆ ಘೋಷಣೆಯಾಗದ ಕಾರಣ ತಕ್ಷಣಕ್ಕೆ ಉದಯನಿಧಿ ಶಾಸಕ ಸ್ಥಾನದಿಂದ ವಜಾ ಮಾಡಲು ಆಗದು ಎಂದು ಪ್ರಕಟಿಸಿದೆ.
ಚೆನ್ನೈ: ಸನಾತನ ಧರ್ಮವನ್ನು ಮಲೇರಿಯಾಕ್ಕೆ ಹೋಲಿಸಿದ ಕಾರಣ ಸೋಮವಾರವಷ್ಟೇ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಉದಯನಿಧಿ ಸ್ಟಾಲಿನ್‌ಗೆ ಬುಧವಾರ ಮದ್ರಾಸ್ ಹೈಕೋರ್ಟ್ ಕೂಡ ಜಾಡಿಸಿ ತಿಳುವಳಿಕೆ ಹೇಳಿದೆ.
ಉದಯನಿಧಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಸಲ್ಲಿಸಿದ್ದ ಅರ್ಜಿ ಕುರಿತು ತೀರ್ಪು ನೀಡಿದ ನ್ಯಾಯಾಲಯ ‘ಸನಾತನ ಧರ್ಮವನ್ನು ಡೆಂಗ್ಯೂ, ಹೆಚ್‌ಐವಿ, ಮಲೇರಿಯಾ ಮುಂತಾದ ರೋಗಗಳಿಗೆ ಹೋಲಿಸುವುದು ಸಾಂವಿಧಾನಿಕ ನೀತಿಗಳಿಗೆ ವಿರುದ್ಧವಾದುದು ಮತ್ತು ಇದು ಸುಳ್ಳುಸುದ್ದಿ ಹಬ್ಬಿಸುವುದಕ್ಕೆ ಸಮನಾಗುತ್ತದೆ. ಸಾಂವಿಧಾನಿಕವಾಗಿ ಜವಾಬ್ದಾರಿಯುತ ಹುದ್ದೆ ಅಲಂಕರಿಸಿರುವ ವ್ಯಕ್ತಿಗಳು ಸಮಾಜವನ್ನು ವಿಭಜಿಸುವಂತಹ ಹೇಳಿಕೆಗಳನ್ನು ನೀಡಬಾರದು. ಅವರು ಕೇವಲ ಸಂವಿಧಾನ ಪ್ರತಿಪಾದಿಸುವ ನೀತಿ ಮತ್ತು ಆಶಯಗಳಿಗೆ ಮಾತ್ರ ಬದ್ಧವಾಗಿರಬೇಕು’ ಎಂದು ತಿಳಿ ಹೇಳಿತು.ಅಲ್ಲದೆ ಉದಯನಿಧಿಯನ್ನು ಯಾವ ನ್ಯಾಯಾಲಯದಲ್ಲೂ ಸನಾತನ ಧರ್ಮದ ವಿರುದ್ಧ ಮಾತನಾಡಿದ ಕುರಿತಾಗಿ ಅಪರಾಧಿ ಎಂದು ಘೋಷಣೆಯಾಗದ ಕಾರಣ ಶಾಸಕ ಸ್ಥಾನದಿಂದ ಅನರ್ಹ ಮಾಡಲು ಬರುವುದಿಲ್ಲ ಎಂಬುದಾಗಿ ತೀರ್ಪು ಪ್ರಕಟಿಸಿದೆ.