ಸಾರಾಂಶ
ಮುಂಬೈ : ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ‘ಎಜುಕೇಟ್ ಗರ್ಲ್ಸ್’ ಸಂಸ್ಥೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸಸೇ ಪ್ರಶಸ್ತಿಗೆ ಭಾಜನವಾಗಿದೆ. ಈ ಮೂಲಕ ಈ ಪುರಸ್ಕಾರ ಪಡೆದ ದೇಶದ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆ ಗಳಿಸಿಕೊಂಡಿದೆ.
ಏಷ್ಯಾದ ನೊಬೆಲ್ ಎಂದು ಕರೆಯಲ್ಪಡುವ ಈ ಪುರಸ್ಕಾರವನ್ನು ನಿಸ್ವಾರ್ಥ ಸೇವೆ ಮಾಡಿದವರನ್ನು ಗುರುತಿಸಿ ನೀಡಲಾಗುತ್ತದೆ. ಫಿಲಿಪ್ಪೀನ್ಸ್ ಮೂಲದ ರಾಮನ್ ಮ್ಯಾಗ್ಸಸೇ ಅವಾರ್ಡ್ ಫೌಂಡೇಶನ್ ಈ ಪ್ರಶಸ್ತಿ ನೀಡುತ್ತದೆ.
ಎಜುಕೇಟ್ ಗರ್ಲ್ಸ್ ಸಂಸ್ಥೆ, ಹೆಣ್ಣು ಮಕ್ಕಳು ಶಿಕ್ಷಣದ ಮೂಲಕ ಸಾಮಾಜಿಕ ತಾರತಮ್ಯವನ್ನು ಹೊಗಲಾಡಿಸಲು ಸಾಧ್ಯ ಎನ್ನುವ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆ ಜೊತೆಗೆ ಮಾಲ್ಡೀವ್ಸ್‌ನ ಶಾಹಿನಾ ಅಲಿ ಮತ್ತು ಫಿಲಿಪ್ಪೀನ್ಸ್‌ನ ಫ್ಲೇವಿಯಾನೊ ಆಂಟೋನಿಯೊ ಎಲ್ ವಿಲ್ಲಾನುಯೆವಾ ಕೂಡಾ ಈ ವರ್ಷದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
30000 ಹಳ್ಳಿಗಳಲ್ಲಿ ಶಿಕ್ಷಣದ ಸೇವೆ
2007ರಲ್ಲಿ ಆರಂಭವಾದ ಎಜುಕೇಟ್ ಗರ್ಲ್ಸ್ ಸಫೀನಾ ಹುಸೈನ್‌ರ ಕನಸು. ರಾಜಸ್ಥಾನದಲ್ಲಿ ಆರಂಭವಾದ ಸಂಸ್ಥೆ, ಶಿಕ್ಷಣ ಅಗತ್ಯವಿರುವ ಸಮುದಾಯಗಳನ್ನು ಗುರುತಿಸಿ, ಅದರಲ್ಲಿ ಶಿಕ್ಷಣದಿಂದ ಹೊರಗುಳಿದ ಬಾಲಕಿಯರಿಗೆ ಶಿಕ್ಷಣ ನೀಡಲು ನೆರವಾಗಿದೆ. 50 ಗ್ರಾಮದಲ್ಲಿ ಆರಂಭವಾಗಿ ಇಂದು 30 ಸಾವಿರಕ್ಕೂ ಹೆಚ್ಚು ಹಳ್ಳಿ ತಲುಪಿದೆ. 20 ಲಕ್ಷಕ್ಕೂ ಹೆಚ್ಚು ಬಾಲಕಿಯರು ಇದರ ಪ್ರಯೋಜನ ಪಡೆದಿದ್ದಾರೆ. ಸದ್ಯ ಈ ಸಂಸ್ಥೆ ರಾಜಸ್ಥಾನದ ಮಾತ್ರವಲ್ಲದೇ ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾಗೂ ತನ್ನ ವ್ಯಾಪ್ತಿ ವಿಸ್ತರಿಸಿದೆ.