ಸಾರಾಂಶ
ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ 10 ದಿನದಲ್ಲಿ 10 ಕೋಟಿಗೂ ಅಧಿಕ ಜನರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ 10 ದಿನದಲ್ಲಿ 10 ಕೋಟಿಗೂ ಅಧಿಕ ಜನರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳ ಸಂಗಮಸ್ಥಾನದಲ್ಲಿ ಜ.13ರಿಂದ ಆರಂಭವಾಗಿರುವ ಕುಂಭಮೇಳದಲ್ಲಿ ದಿನಂಪ್ರತಿ ಸರಾಸರಿಯಾಗಿ 1 ಕೋಟಿ ಜನರು ಪುಣ್ಯಸ್ನಾನದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಮಕರ ಸಂಕ್ರಾಂತಿ ಹಬ್ಬದಂದು ಅತಿ ಹೆಚ್ಚು 3.5 ಕೋಟಿ ಜನರು, ಪೌಷ್ಯ ಪೂರ್ಣಿಮೆಯಂದು 1.7 ಕೋಟಿ ಜನರು ಗಂಗೆಯಲ್ಲಿ ಸ್ನಾನ ಮಾಡಿದ್ದಾರೆ. ಗುರುವಾರ ಒಂದೇ ದಿನ ಮಧ್ಯಾಹ್ನ 12 ಗಂಟೆವರೆಗೆ 30 ಲಕ್ಷ ಜನರು ಮೇಳದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆ.26ರಂದು ಕುಂಭ ಮೇಳ ಮುಕ್ತಾಯಗೊಳ್ಳಲಿದೆ.
ಪ್ರಯಾಗದಲ್ಲಿ ರೈಲ್ವೆ ಸೌಲಭ್ಯ ಪರೀಶೀಲಿಸಿದ ಸೋಮಣ್ಣ
ನವದೆಹಲಿ: ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗುರುವಾರ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಆಗಮಿಸಿದರು ಹಾಗೂ ಅಲ್ಲಿ ರೈಲ್ವೆ ನಿರ್ಮಿಸಿರುವ ಸೌಕರ್ಯಗಳನ್ನು ಪರಿಶೀಲಿಸಿ, ಜನರು, ಸಿಬ್ಬಂದಿಗಳ ಜೊತೆ ಸಂವಾದ ನಡೆಸಿದರು.ತಮ್ಮ ಭೇಟಿ ವೇಳೆ ಸಂಗಮ ಕ್ಷೇತ್ರದಲ್ಲಿ ರೈಲ್ವೆ/ಐಆರ್‌ಸಿಟಿಸಿ ನಿರ್ಮಿಸಿದ್ದ ವ್ಯವಸ್ಥೆಗಳ ಬಳಿ ತೆರಳಿ ಪರಿಶೀಲಿಸಿದರು. ಬಳಿಕ ರೈಲ್ವೆ ನಿಲ್ದಾಣಕ್ಕೆ ತೆರಳಿ, ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಜನರಿಗೆ ಅನುಕೂಲಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಅಭಿನಂದಿಸಿದರು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ನಡುವೆ, ‘ಪ್ರಯಾಗರಾಜ್‌ನ ರೈಲ್ವೆ ಟಿಕೆಟ್ ಕೌಂಟರ್‌ಗೆ ಭೇಟಿ ನೀಡಿ, ಟಿಕೆಟ್ ವಿತರಣೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಯಿತು’ ಎಂದು ಸೋಮಣ್ಣ ಟ್ವೀಟ್ ಮಾಡಿದ್ದಾರೆ.ಅಂದೇ ಕುಂಭಮೇಳದಲ್ಲಿ ಪತ್ನಿ ಸಮೇತರಾಗಿ ಸಚಿವರು ಪವಿತ್ರ ಸ್ನಾನ ಮಾಡಿದರು.