ಮಹಾಕುಂಭಮೇಳದಲ್ಲಿ ಮಾಘಿ ಪೂರ್ಣಿಮೆ : ತ್ರಿವೇಣಿ ಸಂಗಮದಲ್ಲಿ 2 ಕೋಟಿ ಭಕ್ತರಿಂದ ಪುಣ್ಯಸ್ನಾನ

| N/A | Published : Feb 13 2025, 12:48 AM IST / Updated: Feb 13 2025, 04:15 AM IST

ಸಾರಾಂಶ

ಮಹಾಕುಂಭಮೇಳದಲ್ಲಿ ಮಾಘಿ ಪುಣ್ಯ ನಿಮಿತ್ತ ನಡೆದ ಮಾಘಿ ಪೂರ್ಣಿಮೆ ಪುಣ್ಯ ಸ್ನಾನ ಸಂಪನ್ನಗೊಂಡಿದ್ದು, ಬುಧವಾರ 2 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

ಪ್ರಯಾಗ್‌ರಾಜ್: ಮಹಾಕುಂಭಮೇಳದಲ್ಲಿ ಮಾಘಿ ಪುಣ್ಯ ನಿಮಿತ್ತ ನಡೆದ ಮಾಘಿ ಪೂರ್ಣಿಮೆ ಪುಣ್ಯ ಸ್ನಾನ ಸಂಪನ್ನಗೊಂಡಿದ್ದು, ಬುಧವಾರ 2 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

ಬುಧವಾರ ಮುಂಜಾನೆಯಿಂದಲೇ ಪುಣ್ಯಸ್ನಾನ ಆರಂಭವಾಗಿತ್ತು. ಕೋಟ್ಯಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮೌನಿ ಅಮಾವಾಸ್ಯೆಯಿಂದು ನಡೆದ ರೀತಿಯಲ್ಲಿ ಯಾವುದೇ ಗೊಂದಲಗಳು, ಅಹಿತಕರ ಘಟನೆಗಳು ನಡೆಯಕೂಡದು ಎನ್ನುವ ಕಾರಣಕ್ಕೆ ಉತ್ತರ ಪ್ರದೇಶ ಸರ್ಕಾರ ಮುಂಜಾಗ್ರತಾ ಕ್ರಮ ವಹಿಸಿತ್ತು. ಸಿಎಂ ಯೋಗಿ ಆದಿತ್ಯನಾಥ್‌ ಅವರು ಲಖನೌನ ವಾರ್‌ ರೂಂನಿಂದಲೇ ಕಾರ್ಯಕ್ರಮದ ಆಯೋಜನೆ ಪರಿಶೀಲಿಸಿದ್ದರು. ಭಕ್ತರ ಸುರಕ್ಷತೆಗಾಗಿ ಸರ್ಕಾರ ’ಆಪರೇಷನ್ ಚತುರ್ಭುಜ’ ಹೆಸರಿನ ಕಾರ್ಯಾಚರಣೆ ಕೂಡ ಕೈಗೊಂಡಿತು. ಒಟ್ಟಿನಲ್ಲಿ ಯಾವುದೇ ಗೊಂದಲಗಳಿರದೇ ಸುಸೂತ್ರವಾಗಿ ಮಾಘಿ ಪುರ್ಣಿಮೆ ಪುಣ್ಯಸ್ನಾನ ನಡೆದಿದ್ದು, ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಂಭಮೇಳದ ಅವಧಿಯಲ್ಲಿ ನಡೆಯುವ ಒಟ್ಟು 6 ಪುಣ್ಯಸ್ನಾನಗಳ ಬುಧವಾರ 5ನೆಯ ಪುಣ್ಯಸ್ನಾನ ನೆರವೇರಿತು. 6ನೇ ಪುಣ್ಯಸ್ನಾನ ಫೆ.26ರ ಮಹಾಶಿವರಾತ್ರಿಯಂದು ನಡೆಯಲಿದೆ. ಮಾಘಿ ಪೂರ್ಣಿಮೆಯೊಂದಿಗೆ ತಿಂಗಳ ಕಾಲ ನಡೆಯುವ ಕಲ್ಪವಾಸವೂ ಕೊನೆಗೊಳ್ಳುತ್ತದೆ. ಸುಮಾರು 10 ಲಕ್ಷ ಕಲ್ಪವಾಸಿಗಳು ಕುಂಭಮೇಳವನ್ನು ತೊರೆಯಲಿದ್ದು, ಸಂಚಾರಿ ನಿಯಮ ಪಾಲಿಸುವಂತೆ ಉತ್ತರ ಪ್ರದೇಶ ಸರ್ಕಾರ ಮನವಿ ಮಾಡಿದೆ.

ಇನ್ನು ಸರ್ಕಾರದ ಮಾಹಿತಿ ಪ್ರಕಾರ ಕುಂಭಮೇಳ ಆರಂಭವಾದಾಗಿನಿಂದ ಇದುವರೆಗೆ 47 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ.