ಸಾರಾಂಶ
ಇತ್ತೀಚೆಗೆ ಮುಕ್ತಾಯಗೊಂಡ ಮಹಾಕುಂಭ ಮೇಳದ ಕುರಿತು ಪ್ರಧಾನಿ ನರೇಂದ್ರ ಅವರ ಮೆಚ್ಚುಗೆ ಮಾತು ಮತ್ತು ಬಳಿಕ ವಿಪಕ್ಷಗಳ ನಾಯಕರಿಗೆ ಮೋದಿ ಭಾಷಣದ ಮೇಲೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ವಿಷಯ ಮಂಗಳವಾರ ಲೋಕಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿ, ಕಲಾಪವನ್ನೇ ಬಲಿ ಪಡೆದಿದೆ.
ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಮಹಾಕುಂಭ ಮೇಳದ ಕುರಿತು ಪ್ರಧಾನಿ ನರೇಂದ್ರ ಅವರ ಮೆಚ್ಚುಗೆ ಮಾತು ಮತ್ತು ಬಳಿಕ ವಿಪಕ್ಷಗಳ ನಾಯಕರಿಗೆ ಮೋದಿ ಭಾಷಣದ ಮೇಲೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ವಿಷಯ ಮಂಗಳವಾರ ಲೋಕಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿ, ಕಲಾಪವನ್ನೇ ಬಲಿ ಪಡೆದಿದೆ.
ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಮೋದಿ, ‘ಕುಂಭಮೇಳವು ದೇಶದಲ್ಲಿ ಏಕತೆಯ ಭಾವವನ್ನು ಬಲಪಡಿಸಿದೆ. ಜೊತೆಗೆ, ಅಂತಹ ಬೃಹತ್ ಕಾರ್ಯಕ್ರಮ ಆಯೋಜನೆ ಸಾಧ್ಯವೇ ಎಂದು ಭಾರತದ ಸಾಮರ್ಥ್ಯವನ್ನು ಪ್ರಶ್ನಿಸಿದವರಿಗೆ ಉತ್ತರ ನೀಡಿದೆ. ಇದರ ಯಶಸ್ಸು ಸರ್ಕಾರ ಹಾಗೂ ಜನರ ಕೊಡುಗೆಯ ಫಲವಾಗಿದೆ. ಒಂದೂವರೆ ತಿಂಗಳಿಗೂ ಅಧಿಕ ನಡೆದ ಈ ಮೇಳದಲ್ಲಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಆಗಮಿಸಿದ್ದರು. ಅವರೆಲ್ಲ ನಾನು ಎಂಬುದನ್ನು ಬಿಟ್ಟು ನಾವು ಎಂಬ ಏಕತಾ ಭಾವದಿಂದ ಪ್ರಯಾಗ್‌ರಾಜ್‌ನಲ್ಲಿ ನೆರೆದಿದ್ದರು’ ಎಂದರು. ಅಂತೆಯೇ, ಕುಂಭಮೇಳವನ್ನು 1857ರ ಸ್ವಾತಂತ್ರ್ಯ ಸಂಗ್ರಾಮ, ಸುಭಾಷ್ ಚಂದ್ರ ಬೋಸ್ ಕರೆ ನೀಡಿದ್ದ ಚಲೋ ದೆಹಲಿ, ಮಹಾತ್ಮಾ ಗಾಂಧೀಜಿ ಅವರ ದಂಡಿ ಸತ್ಯಾಗ್ರಹದಂತೆ ‘ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳವು ಜಾಗೃತ ದೇಶವನ್ನು ಪ್ರತಿಬಿಂಬಿಸುವ ಮೈಲುಗಲ್ಲಾಗಿದೆ’ ಎಂದು ಹೇಳಿದರು.ಕಲಾಪ ಮುಂದೂಡಿಕೆ: ಇದರ ಬೆನ್ನಲ್ಲೇ ಕುಂಭಮೇಳದ ಕುರಿತು ಕೆಲ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಹಾಗೂ ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ನಿಖರ ಸಂಖ್ಯೆಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿ ವಿಪಕ್ಷ ನಾಯಕರು ಕೋಲಾಹಲ ಎಬ್ಬಿಸಿದರು. ಹೀಗಾಗಿ ಕಲಾಪ ಮುಂದೂಡಲಾಯಿತು.
ರಾಗಾ ಕಿಡಿ:ಕಲಾಪ ಮುಂದೂಡಿಕೆಯ ಬಳಿಕ ಸಂಸತ್ತಿ ಹೊರಗೆ ಪತ್ರಕರ್ತರೊಂದಿಗೆ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ಸಿಗಬೇಕು. ಆದರೆ ನವಭಾರತದಲ್ಲಿ ಅದಕ್ಕೆ ಅನುವು ಮಾಡಿಕೊಡಲಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂತೆಯೇ, ‘ಕುಂಭವು ನಮ್ಮ ಸಂಪ್ರದಾಯ, ಇತಿಹಾಸ ಮತ್ತು ಸಂಸ್ಕೃತಿ ಎಂಬ ಪ್ರಧಾನಿಯವರ ಮಾತನ್ನು ನಾನೂ ಬೆಂಬಲಿಸುವವನಿದ್ದೆ. ಜೊತೆಗೆ, ಕಾಲ್ತುಳಿತಕ್ಕೆ ಬಲಿಯಾದವರಿಗೆ ಮೋದಿ ಶ್ರದ್ಧಾಂಜಲಿಯನ್ನೂ ಸಲ್ಲಿಸದ ಕುರಿತು ಆಕ್ಷೇಪಿಸಬಯಸಿದ್ದೆ. ಕುಂಭಮೇಳಕ್ಕೆ ಹೋದ ಯುವಕರಿಗೆ ಉದ್ಯೋಗದ ಅವಶ್ಯಕತೆಯೂ ಇದ್ದು, ಪ್ರಧಾನಿಯವರು ಆ ಬಗ್ಗೆ ಮಾತಾಡುವಂತೆ ಆಗ್ರಹಿಸಲು ಮುಂದಾಗಿದ್ದೆ. ಆದರೆ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ’ ಎಂದು ರಾಹುಲ್ ಆರೋಪಿಸಿದರು. ಇದನ್ನು ಅವರ ಸಹೋದರಿ, ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಬೆಂಬಲಿಸಿದರು.