ಸಾರಾಂಶ
ನವದೆಹಲಿ: 1980 ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಬಿ.ಆರ್.ಛೋಪ್ರಾ ನಿರ್ದೇಶನದ ಪ್ರಸಿದ್ಧ ಧಾರಾವಾಹಿ ಮಹಾಭಾರತದಲ್ಲಿ ಕರ್ಣನ ಪಾತ್ರಧಾರಿಯಾಗಿದ್ದ ಖ್ಯಾತ ನಟ ಪಂಕಜ್ ಧೀರ್ (68) ಕ್ಯಾನ್ಸರ್‌ನಿಂದ ಬುಧವಾರ ಅಸುನೀಗಿದರು. ಧೀರ್ ಅಂತ್ಯಕ್ರಿಯೆ ಬುಧವಾರ ಸಂಜೆ ಮುಂಬೈನಲ್ಲಿ ನಡೆಯಿತು. ನಟನ ಅಗಲಿಕೆಗೆ ಚಿತ್ರರಂಗ ಕಂಬನಿ ಮಿಡಿದಿದೆ. ‘ದಸ್ತಕ್’, ‘ಚಂದ್ರಕಾಂತ’, ‘ಬಧೋ ಬಹು’, ‘ಜೀ ಹಾರರ್ ಶೋ’, ‘ಕಾನೂನ್’, ‘ಸಸುರಲ್ ಸಿಮಾರ್ ಕಾ’, ‘ಸೋಲ್ಜರ್’, ‘ಅಂದಾಜ್’, ‘ಬಾದ್‌ಶಾ’, ‘ತುಮ್ಕೋ ನಾ ಭೂಲ್ ಪಾಯೆಂಗೆ’ ಪಂಕಜ್ ಧೀರ್ ಅವರ ಪ್ರಮುಖ ಟೀವಿ ಧಾರಾವಾಹಿಗಳು. ಕನ್ನಡದಲ್ಲಿ ವಿಷ್ಣು ವಿಜಯ ಮತ್ತು ವಿಷ್ಣು ಸೇನಾ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆಗೆ ಪಂಕಜ್ ನಟಿಸಿದ್ದರು. ಪಂಕಜ್‌ರ ಪತ್ನಿ ಅನಿತಾ ಧೀರ್ ವಸ್ತ್ರ ವಿನ್ಯಾಸಕಿಯಾಗಿದ್ದಾರೆ. ಪುತ್ರ ನಿಕಿತಿನ್ ಧೀರ್ ಸಹ ನಟ.
ತೆರಿಗೆ ದಾಳಿಗೆ ಎಚ್ಚರಿಕೆಗೆ ಬೆದರಿ ಹಲವು ದೇಶ ಬ್ರಿಕ್ಸ್‌ನಿಂದ ದೂರ : ಟ್ರಂಪ್
ನ್ಯೂಯಾರ್ಕ್: ಶೇ.200ರಷ್ಟು ತೆರಿಗೆ ದಾಳಿಯ ಬೆದರಿಕೆ ಒಡ್ಡಿ ಭಾರತ- ಪಾಕಿಸ್ತಾನ ಯುದ್ಧ ತಡೆದೆ ಎಂದು 51 ಬಾರಿ ಕೊಚ್ಚಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಹಲವು ದೇಶಗಳು ಬ್ರಿಕ್ಸ್ ಕೂಟ ಸೇರ್ಪಡೆಯಾಗುವುದನ್ನು ತಡೆಯಲೂ ಇದೇ ತಂತ್ರ ಬಳಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೆ ಬ್ರಿಕ್ಸ್ ಕೂಟ ಡಾಲರ್ ಮೇಲಿನ ದಾಳಿ ಎಂದೂ ಕಿಡಿಕಾರಿದ್ದಾರೆ.ಮಂಗಳವಾರ ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲಿ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿದ ಟ್ರಂಪ್, ‘ಡಾಲರ್‌ನಲ್ಲಿ ವ್ಯವಹರಿಸುವವರಿಗೆ ವಿಶೇಷ ಲಾಭಗಳು ಸಿಗಲಿವೆ. ಆದರೆ ಡಾಲರ್‌ಗೆ ಬ್ರಿಕ್ಸ್ ಅಪಾಯಕಾರಿ. ಆದ್ದರಿಂದ ಆ ಕೂಟಕ್ಕೆ ಸೇರುವವರು ಅಮೆರಿಕಕ್ಕೆ ಮಾಡುವ ರಫ್ತಿನ ಮೇಲೆ ಹೆಚ್ಚು ತೆರಿಗೆ ಹಾಕುವುದಾಗಿ ಹೇಳಿದೆ. ಅವರೆಲ್ಲಾ ಕೂಟವನ್ನು ಬಿಟ್ಟರು. ಬೈಡೆನ್ ಅಥವಾ ಕಮಲಾ ಹ್ಯಾರಿಸ್ ಅಧ್ಯಕ್ಷರಾಗುತ್ತಿದ್ದರೆ ಡಾಲರ್ ಕರೆನ್ಸಿಯಾಗಿ ಉಳಿಯುತ್ತಿರಲಿಲ್ಲ’ ಎಂದು ತಮ್ಮನ್ನು ತಾವು ಡಾಲರ್ ರಕ್ಷಕನಂತೆ ಬಿಂಬಿಸಿಕೊಂಡು ಹೊಗಳಿಕೊಂಡಿದ್ದಾರೆ.
ಭಾರತವೂ ಭಾಗವಾಗಿರುವ ಬ್ರಿಕ್ಸ್ ಕೂಟ ಹೊಸ ಕರೆನ್ಸಿ ಸೃಷ್ಟಿಸಿದರೆ ಅಧಿಕ ತೆರಿಗೆ ಹೇರುವುದಾಗಿ ಟ್ರಂಪ್ ಈ ಮೊದಲೊಮ್ಮೆ ಬೆದರಿಸಿದ್ದರು.
ಛತ್ತೀಸಗಢ: ₹50 ಲಕ್ಷ ಇನಾಮು ಹೊಂದಿದ್ದ 16 ಸೇರಿ 77 ನಕ್ಸಲರು ಶರಣು
ಸುಕ್ಮಾ: ತಲೆಗೆ 50 ಲಕ್ಷ ರು. ಇನಾಮು ಘೋಷಣೆಯಾಗಿದ್ದ 16 ನಕ್ಸಲರು ಸೇರಿದಂತೆ ಒಟ್ಟು 77 ನಕ್ಸಲರು ಛತ್ತೀಸಗಢದ ಸುಕ್ಮಾ ಮತ್ತು ಕಂಕೇರ್ ಜಿಲ್ಲೆಗಳಲ್ಲಿ ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ. ನಕ್ಸಲರ ಪ್ರಭಾವಿ ನಾಯಕ ವೇಣುಗೋಪಾಲ್ ರಾವ್ ಅಲಿಯಾಸ್ ಭೂಪತಿ ತನ್ನ 60 ಸಹಚರರೊಂದಿಗೆ ಮಂಗಳವಾರ ಮುಂಬೈನಲ್ಲಿ ಶರಣಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸುಕ್ಮಾ ಜಿಲ್ಲೆಯಲ್ಲಿ 10 ಮಹಿಳೆಯರು ಸೇರಿದಂತೆ 27 ನಕ್ಸಲರು ಶರಣಾಗಿದ್ದಾರೆ. ಇವರಲ್ಲಿ 16 ಮಂದಿ ತಲೆಗೆ ತಲಾ 50 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ಕಂಕೇರ್ ಜಿಲ್ಲೆಯಲ್ಲಿ 32 ಮಹಿಳೆಯರು ಸೇರಿ 50 ನಕ್ಸಲರು ಶರಣಾಗತರಾಗಿದ್ದಾರೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೇವಾಲಯದ ಹಣ ಅಭಿವೃದ್ಧಿಗೆ ಬಳಸುವಂತಿಲ್ಲ: ಹಿಮಾಚಲ ಹೈ
ಹಮೀರ್‌ಪುರ: ತ.ನಾಡಿನಲ್ಲಿ ದೇವಸ್ಥಾನದ ದುಡ್ಡು ಸತ್ಕಾರ್ಯಕ್ಕೆ ಮಾತ್ರ ಬಳಸಬೇಕು ಎಂದು ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ, ಹಿಮಾಚಲ ಪ್ರದೇಶ ಹೈಕೋರ್ಟ್ ಕೂಡ ಅಂತಹದ್ದೇ ಆದೇಶವನ್ನು ಹೊರಡಿಸಿದೆ. ‘ದೇಗುಲದಲ್ಲಿ ಸಂಗ್ರಹವಾದ ಹಣವನ್ನು ಸರ್ಕಾರದ ಯೋಜನೆಗಳ ಬದಲಾಗಿ ಧಾರ್ಮಿಕ ಕಾರ್ಯಗಳಿಗೆ ಬಳಸಿ’ ಎಂದು ಆದೇಶಿಸಿದೆ. ದೇವಾಲಯದ ನಿಧಿಯ ಸೂಕ್ತ ಬಳಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ಪಟ್ಟಿದೆ. ‘ ದೇವಾಲಯದಲ್ಲಿ ಸಂಗ್ರಹವಾದ ಪ್ರತಿಯೊಂದು ರುಪಾಯಿಯು ಧಾರ್ಮಿಕ ಉದ್ದೇಶಕ್ಕಾಗಿ ಬಳಕೆಯಾಗಬೇಕು. ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಬಳಸಕೂಡದು. ಭಕ್ತರು ದೇವಾಲಯಗಳಿಗೆ ನೀಡುವ ಪವಿತ್ರ ದೇಣಿಗೆಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಾಗ ಅದು ನಂಬಿಕೆಗೆ ದ್ರೋಹ ಮಾಡಿದಂತಾಗುತ್ತದೆ. ಇದರಿಂದ ಪಾವಿತ್ರ್ಯತೆಗೆ ಧಕ್ಕೆ. ದೇವಾಲಯಗಳಲ್ಲಿನ ಹಣದ ದುರುಪಯೋಗ ತಡೆಯುವ ಅಗತ್ಯವಿದೆ. ಧರ್ಮದ ಮನೋಭಾವದಿಂದ ವಿಪತ್ತಿಗೆ ಬಳಸಬಹುದು. ಆದರೆ ಸರ್ಕಾರ ಮತ್ತು ವಿವಿಧ ನಿಧಿಗಳ ಕೊಡುಗೆಯಾಗಿ ಅಲ್ಲ ’ ಎಂದು ಅಭಿಪ್ರಾಯಪಟ್ಟಿದೆ.
ಜಿಎಸ್ಟಿ ಕಡಿತ ಪರಿಣಾಮ ಸೆಪ್ಟೆಂಬರಲ್ಲಿ ವಾಹನಗಳ ಮಾರಾಟ ಬಂಪರ್ ಏರಿಕೆ
ನವದೆಹಲಿ: ಜಿಎಸ್ಟಿ ಕಡಿತ, ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಬಂಪರ್ ಏರಿಕೆ ಕಂಡುಬಂದಿದೆ. ಸೆಪ್ಟೆಂಬರ್‌ನಲ್ಲಿ ಒಟ್ಟು 3,72,458 ಪ್ರಯಾಣಿಕ ವಾಹನ ಮಾರಾಟವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗಿಆಂತ ಶೇ.4ರಷ್ಟು ಹೆಚ್ಚು. ಇನ್ನು 21.60 ಲಕ್ಷ ದ್ವಿಚಕ್ರ ವಾಹನ ಮಾರಾಟವಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗಿಂತ ಶೇ.7 ಹೆಚ್ಚು. ಇದೇ ಅವಧಿಯಲ್ಲಿ 84077 ತ್ರಿಚಕ್ರ ವಾಹನ ಮಾರಾಟವಾಗಿದ್ದು ಇದು ಶೇ.5.5ರಷ್ಟು ಹೆಚ್ಚು.
ಕೋಲ್ಡ್ರಿಫ್‌ಗೆ ಮ.ಪ್ರ.ದ ಮತ್ತಿಬ್ಬರು ಮಕ್ಕಳು ಸಾವು: 24ಕ್ಕೆ ಏರಿಕೆ
ಛಿಂದ್ವಾಡ: ಮಾರಕ ಕೋಲ್ಡ್ರಿಫ್ ಕೆಮ್ಮಿನೌಷಧ ಸೇವಿಸಿ ಮಧ್ಯಪ್ರದೇಶದ ಛಿಂದ್ವಾಡದಲ್ಲಿ ಮತ್ತಿಬ್ಬರು ಕಂದಮ್ಮಗಳು ಬುಧವಾರ ಸಾವನ್ನಪ್ಪಿವೆ. ಈ ಮೂಲಕ ಕೋಲ್ಡ್ರಿಫ್‌ನಿಂದ ರಾಜ್ಯದಲ್ಲಿ ಮೃತಪಟ್ಟ ಮಕ್ಕಳ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಮೃತ ಕಂದಮ್ಮಗಳನ್ನು 9 ತಿಂಗಳ ದಿವ್ಯಾಂಶು ಯದುವಂಶಿ ಮತ್ತು 3 ವರ್ಷದ ಅಂಬಿಕಾ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಕೋಲ್ಡ್ರಿಫ್ ಸೇವಿಸಿ ಆರೋಗ್ಯ ಹದಗೆಟ್ಟಿದ್ದ ಈ ಹಸುಗೂಸುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ.