ಸಾರಾಂಶ
ಭಾರೀ ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರದಲ್ಲಿ ಮತದಾರರು ಆಪರೇಷನ್ ಕಮಲವನ್ನು ತಿರಸ್ಕರಿಸಿ ಮಹಾ ವಿಕಾಸ್ ಅಘಾಡಿಗೆ ಮಣೆ ಹಾಕಿದ್ದಾರೆ. ಕಳೆದ ಬಾರಿ 23 ಕ್ಷೇತ್ರ ಗೆದ್ದ ಹುಮ್ಮಸ್ಸು ಮತ್ತು ಎರಡು ಪಕ್ಷಗಳನ್ನು ತನ್ನ ತೆಕ್ಕೆಗೆ ಎಳೆದುಕೊಂಡ ಉತ್ಸಾಹದಲ್ಲಿದ್ದ ಬಿಜೆಪಿ ರಾಜ್ಯದಲ್ಲಿರುವ 48 ಸ್ಥಾನಗಳಲ್ಲಿ 45ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿತ್ತು. ಆದರೆ ಎನ್‌ಡಿಎ ಮೈತ್ರಿಕೂಟ ಒಟ್ಟಾರೆಯಾಗಿ ಕೇವಲ 18 ಸ್ಥಾನಗಳಿಗೆ ಸೀಮಿತವಾಗಿದ್ದು, ಶರದ್ ಪವಾರ್, ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್ ಪಕ್ಷವನ್ನು ಒಳಗೊಂಡಿದ್ದ ಮಹಾ ವಿಕಾಸ್ ಅಗಾಢಿ ಭರ್ಜರಿ ಗೆಲುವು ಸಾಧಿಸಿದೆ.
ಪ್ರಮುಖವಾಗಿ ಬಾರಾಮತಿ ಕ್ಷೇತ್ರದಲ್ಲಿ ಪವಾರ್ ಕುಟುಂಬದ ಸೊಸೆಯರ ನಡುವೆ ನಡೆದ ಕಾಳಗದಲ್ಲಿ ಭಾರೀ ಹಗ್ಗಜಗ್ಗಾಟ ನಡೆದು ಕೊನೆಗೂ ವಿಜಯಲಕ್ಷ್ಮಿ ಸುಪ್ರಿಯಾ ಸುಳೆ ಕಡೆಗೆ ಒಲಿದಳು.
ಉದ್ಧವ್ ಎನ್‌ಡಿಎಗೆ?: ಈ ನಡುವೆ ಮಹಾ ವಿಕಾಸ್ ಅಗಾಢಿಯಲ್ಲಿದ್ದು, 5ಕ್ಕೂ ಅಧಿಕ ಸ್ಥಾನಗಳಲ್ಲಿ ಗೆದ್ದಿರುವ ಉದ್ಧವ್ ಠಾಕ್ರೆ ಮುಂದಿನ ದಿನಗಳಲ್ಲಿ ಎನ್‌ಡಿಎ ತೆಕ್ಕೆಗೆ ಬರಲಿದ್ದಾರೆ ಎನ್ನಲಾಗಿದ್ದು, ಆಗ ಬಿಜೆಪಿಗೆ ರಾಜ್ಯದಲ್ಲಿ ನೈತಿಕ ಬಲ ಹೆಚ್ಚಲಿದೆ. ಮತ್ತೊಂದೆಡೆ ತಮ್ಮ ಇಳಿವಯಸ್ಸಿನಲ್ಲೂ ರಣತಂತ್ರ ರೂಪಿಸಿ ಸಂದಿಗ್ಧ ಪರಿಸ್ಥಿತಿಯಲ್ಲಿ ಶರದ್ ಪವಾರ್ ತಮ್ಮ ಪುತ್ರಿಯೂ ಸೇರಿದಂತೆ ಪಕ್ಷವು ಪುಟಿದೇಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.