ಡಿಸಿಎಂ ಹುದ್ದೆಗೆ ರಾಜೀನಾಮೆ: ಫಡ್ನವೀಸ್‌ ಆಫರ್‌

| Published : Jun 06 2024, 12:31 AM IST

ಡಿಸಿಎಂ ಹುದ್ದೆಗೆ ರಾಜೀನಾಮೆ: ಫಡ್ನವೀಸ್‌ ಆಫರ್‌
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಹಿನ್ನೆಲೆ ಪಕ್ಷ ಸಂಘಟನೆಗಾಗಿ ಹುದ್ದೆ ಬಿಡಲು ನಿರ್ಧಾರ ಮಾಡಿರುವುದಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ತಿಳಿಸಿದ್ದಾರೆ.

ಮುಂಬೈ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಗೆ ಹಿನ್ನಡೆಯಾದ ಬೆನ್ನಲ್ಲೇ, ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಪ್ರಕಟಿಸಿದ್ದಾರೆ. 2019ರಲ್ಲಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 23ರಲ್ಲಿ ಗೆಲುವು ಸಾಧಿಸಿತ್ತು. ಆದರೆ 2024ರಲ್ಲಿ 28 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಗೆದ್ದಿದ್ದು 9 ಸ್ಥಾನ ಮಾತ್ರ. ಇನ್ನೊಂದೆಡೆ 2019ರಲ್ಲಿ ಎನ್‌ಡಿಎ ಕೂಟ 43 ಸ್ಥಾನ ಗೆದ್ದಿದ್ದರೆ, ಈ ಬಾರಿ ಕೇವಲ 17 ಸ್ಥಾನ ಮಾತ್ರ ಪಡೆದುಕೊಂಡಿದೆ.ಈ ಕುರಿತು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಡ್ನವೀಸ್‌ ‘ಮಹಾರಾಷ್ಟ್ರದಲ್ಲಿ ಬಿಜೆಪಿ ಸೋಲಿನ ಪೂರ್ಣ ಹೊಣೆಯನ್ನು ನಾನು ಹೊರುತ್ತೇವೆ. ಕೆಲವೊಂದು ವಿಷಯಗಳಲ್ಲಿ ನಾನು ವಿಫಲನಾಗಿದ್ದೇನೆ ಮತ್ತು ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ನಾನೇ ಕಾರಣನಾಗಿದ್ದೇನೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಗಮನ ಹರಿಸುವ ನಿಟ್ಟಿನಲ್ಲಿ ಮತ್ತು ಹಿನ್ನಡೆಯನ್ನು ಮೆಟ್ಟಿ ನಿಲ್ಲುವ ಸಲುವಾಗಿ ನನ್ನನ್ನು ಸರ್ಕಾರದ ಹುದ್ದೆಗಳಿಂದ ಮುಕ್ತಿಗೊಳಿಸುವಂತೆ ಪಕ್ಷದ ಹಿರಿಯ ನಾಯಕರಿಗೆ ಮನವಿ ಮಾಡುತ್ತೇನೆ. ಈ ಕುರಿತು ಶೀಘ್ರವೇ ಪಕ್ಷದ ಹಿರಿಯನ್ನು ಭೇಟಿ ಮಾಡಿ ಅವರಿಗೆ ನನ್ನ ಅಭಿಪ್ರಾಯ ತಿಳಿಸುತ್ತೇನೆ’ ಎಂದು ಹೇಳಿದರು.ಇದೇ ವೇಳೆ ಸರ್ಕಾರದಲ್ಲಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮತ್ತು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ನಡುವೆ ಸಮನ್ವಯ ಕೊರತೆ ಇದೆ. ಅದನ್ನು ನಾವು ಮಾತುಕತೆ ಮೂಲಕ ಪರಿಹರಿಸಿಕೊಳ್ಳುತ್ತೇವೆ ಎಂದು ಫಡ್ನವೀಸ್‌ ಹೇಳಿದರು.

ಇದು ನಾಟಕ- ವಿಪಕ್ಷ:

ಈ ನಡುವೆ ಶಿವಸೇನೆ (ಯುಬಿಟಿ) ನಾಯಕರು, ಕಾಂಗ್ರೆಸ್‌ ಹಾಗೂ ಎನ್‌ಸಿಪಿ (ಶರದ್‌ ಬಣ) ಮುಖಂಡರು ಫಡ್ನವೀಸ್‌ ನಾಟಕ ಮಾಡುತ್ತಿದ್ದಾರೆ ಎಂದಿದೆ.