ಶಿಂಧೆ ಬಣವೇ ನಿಜವಾದ ಶಿವಸೇನೆ

| Published : Jan 11 2024, 01:30 AM IST / Updated: Jan 11 2024, 10:54 AM IST

ಸಾರಾಂಶ

ಮಹಾ ವಿಧಾನಸಭಾ ಸ್ಪೀಕರ್‌ ಮಹತ್ವದ ರೂಲಿಂಗ್‌ ಮಾಡಿ ಶಾಸಕರ ಅನರ್ಹತೆ ಸಾಧ್ಯವಿಲ್ಲ ಎಂದು ತಿಳಿಸಿದ್ದು, ಶಿಂಧೆ ಅನರ್ಹತೆ ಕೋರಿದ್ದ ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.

ಪಿಟಿಐ ಮುಂಬೈ

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಯೇ ‘ನಿಜವಾದ ರಾಜಕೀಯ ಪಕ್ಷ’, ಏಕನಾಥ ಶಿಂಧೆ ಅವರೇ ನಿಜವಾದ ಶಿವಸೇನಾ ನಾಯಕ ಎಂದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. 

ಅಲ್ಲದೆ ಶಿಂಧೆ ಬಣದ 16 ಶಾಸಕರನ್ನು ಬಂಡಾಯ ಶಾಸಕರು ಎಂದು ಪರಿಗಣಿಸಿ ಅವರನ್ನು ಅನರ್ಹಗೊಳಿಸಬೇಕು ಎಂಬ ಉದ್ಧವ್‌ ಠಾಕ್ರೆ ಬಣದ ವಾದವನ್ನು ಅವರು ತಳ್ಳಿಹಾಕಿದ್ದಾರೆ. 

ಇದರೊಂದಿಗೆ ಶಿವಸೇನೆ (ಶಿಂಧೆ ಬಣ) ಮತ್ತು ಬಿಜೆಪಿ ಮೈತ್ರಿಕೂಟದ ಮಹಾರಾಷ್ಟ್ರ ಸರ್ಕಾರ, ಪತನದ ಆತಂಕದಿಂದ ಪಾರಾಗಿದ್ದರೆ, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣಕ್ಕೆ ಭಾರೀ ಹಿನ್ನಡೆಯಾಗಿದೆ. 

ಜೊತೆಗೆ 2 ವರ್ಷಗಳಿಂದ ನಡೆಯುತ್ತಿದ್ದ ಮಹಾರಾಷ್ಟ್ರ ಅನರ್ಹತೆ ಬೃಹನ್ನಾಟಕ ಒಂದು ಹಂತಕ್ಕೆ ಅಂತ್ಯಗೊಂಡಿದೆ. ಆದರೆ ಸ್ಪೀಕರ್ ತೀರ್ಪನ್ನು ಬಿಜೆಪಿಯ ಷಡ್ಯಂತ್ರ ಎಂದು ಟೀಕಿಸಿರುವ ಉದ್ಧವ್‌ ಬಣ, ಈ ತೀರ್ಪಿನ ವಿರುದ್ದ ಶೀಘ್ರವೇ ಸುಪ್ರೀಂಕೋರ್ಟ್‌ ಮೆಟ್ಟಿಲೇರುವುದಾಗಿ ಘೋಷಿಸಿದೆ. ಮತ್ತೊಂದೆಡೆ ಸ್ಪೀಕರ್‌ ತೀರ್ಪು ಹೊರಬೀಳುತ್ತಲೇ ಶಿಂಧೆ ಬಣದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಏನಿದು ಪ್ರಕರಣ?
2022ರ ಜೂ.21ರಂದು ಬಂಡಾಯ ಎದ್ದು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ ಶಿವಸೇನೆಯ ಏಕನಾಥ ಶಿಂಧೆ ಬಣದ 37 ಶಾಸಕರ ಪೈಕಿ, 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಅರ್ಜಿ ಸಲ್ಲಿಸಿತ್ತು. 

ಅದಕ್ಕೆ ಪ್ರತಿಯಾಗಿ ತಮ್ಮದೇ ಮೂಲ ಶಿವಸೇನೆ ಬಣ ಎಂದು ಘೋಷಿಸಿಕೊಂಡಿದ್ದ ಶಿಂಧೆ ಬಣ, ಉದ್ಧವ್‌ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿತ್ತು.

ಸ್ಪೀಕರ್‌ ಹೇಳಿದ್ದೇನು?
ಉಭಯ ಬಣಗಳ ದಾಖಲೆ ಪರಿಶೀಲಿಸಿ, ವಾದ ಆಲಿಸಿದ್ದ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಬುಧವಾರ ತಮ್ಮ ತೀರ್ಪು ಪ್ರಕಟಿಸಿದರು. ಅದರಲ್ಲಿ ಅವರು, ‘ಏಕನಾಥ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸಲು ಯಾವುದೇ ಕಾರಣವಿಲ್ಲ. ಏಕನಾಥ್ ಶಿಂಧೆ ಅವರದ್ದೇ ನಿಜವಾದ ಶಿವಸೇನೆ ಮತ್ತು ಅವರೇ ಪಕ್ಷದ ನಿಜವಾದ ನಾಯಕ’ ಎಂದು ಹೇಳಿದರು.

‘ಈ ಶಾಸಕರನ್ನು ಉಚ್ಚಾಟಿಸಲು ಸುದ್ದಿ ಪತ್ರಿಕೆಗಳ ವರದಿ ಆಧಾರವಾಗುವುದಿಲ್ಲ ಮತ್ತು ಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ಅನರ್ಹಗೊಳಿಸಲಾಗುವುದಿಲ್ಲ. ಶಿಂಧೆ ಬಣವು 37 ಶಾಸಕರ ಬೆಂಬಲವನ್ನು ಹೊಂದಿದೆ ಮತ್ತು ಅದಕ್ಕೆ ಬಹುಮತವಾಗಿದೆ. ಆದ್ದರಿಂದ ಶಿಂಧೆ ಬಣವೇ ನಿಜವಾದ ಶಿವಸೇನೆ ಮತ್ತು ನಿಜವಾದ ರಾಜಕೀಯ ಪಕ್ಷ. 

ಹಾಗಾಗಿ ಶಿಂಧೆ ಬಣವು ಠಾಕ್ರೆ ಬಣದ ಸುನೀಲ್‌ ಪ್ರಭು ಬದಲು ತಮ್ಮದೇ ಬಣದ ಭರತ್ ಗೊಗವಾಲೆ ಅವರನ್ನು ಸಚೇತಕನನ್ನಾಗಿ ಮಾಡಿದ್ದು ಸಕ್ರಮವಾಗಿದೆ’ ಎಂದರು.ಆದ್ದರಿಂದ, ಶಿಂಧೆ ಬಣದ ವಿಪ್‌ ಭರತ್‌ ಗೋಗಾವಲೆ ಅವರು, ಸೇನಾ ಶಾಸಕರಿಗೆ ಹೊರಡಿಸಿದ್ದ ಸಚೇತಕಾಜ್ಞೆಗಳು ಸಕ್ರಮವೇ ವಿನಾ ಠಾಕ್ರೆ ಬಣದ ವಿಪ್‌ ಅಲ್ಲ ಎಂಬುದು ಇದರ ಅರ್ಥವಾಗಿದೆ. 

ಶಿಂಧೆ ಬಣದ ಶಾಸಕರೆಲ್ಲ ವಿಶ್ವಾಸಮತ ಯಾಚನೆ ವೇಳೆ ಭರತ್‌ ಹೊರಡಿಸಿದ್ದ ವಿಪ್‌ ಪಾಲಿಸಿದ್ದು ಇಲ್ಲಿ ಗಮನಾರ್ಹ.ಇದೇ ವೇಳೆ, ಯಾವುದೇ ನಾಯಕನನ್ನು ಪಕ್ಷದಿಂದ ತೆಗೆದುಹಾಕುವ ಅಧಿಕಾರ ಶಿವಸೇನೆ ‘ಪ್ರಮುಖ’ನಿಗೆ (ಮುಖ್ಯಸ್ಥ) ಇಲ್ಲ. ಏಕಂದರೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ 1999ರ ಪಕ್ಷದ ಸಂವಿಧಾನವು ‘ರಾಷ್ಟ್ರೀಯ ಕಾರ್ಯಕಾರಿಯನ್ನು (ರಾಷ್ಟ್ರೀಯ ಕಾರ್ಯಕಾರಿಣಿ) ಸರ್ವೋಚ್ಚ ಸಂಸ್ಥೆಯನ್ನಾಗಿ ಮಾಡಿದೆ. 

ಪಕ್ಷದಿಂದ ಯಾರನ್ನೇ ವಜಾ ಮಾಡಬೇಕಾಗಿದ್ದರೂ ಕಾರ್ಯಕಾರಿಣಿ ನಿರ್ಧರಿಸಬೇಕೇ ವಿನಾ ಶಿವಸೇನಾ ಪ್ರಮುಖ (ಉದ್ಧವ್ ಠಾಕ್ರೆ) ಅಲ್ಲ. 2018ರಲ್ಲಿ ತಿದ್ದುಪಡಿ ಮಾಡಲಾದ ಪಕ್ಷದ ಸಂವಿಧಾನವನ್ನು ಪರಿಗಣಿಸಲಾಗದು’ ಎಂದು ನಾರ್ವೇಕರ್‌ ನುಡಿದರು.