ಕಾಲಮಿತಿಯಲ್ಲಿ ಕೆಲಸ ಮಾಡುವಂತೆ ಆದೇಶಿಸುವ ಅಧಿಕಾರ ಹೊಂದಿರುವ ಮುಖ್ಯಮಂತ್ರಿಯೇ ಖಾಸಗಿ ಕಂಪನಿ ಅಧಿಕಾರಿಯೊಬ್ಬರ ಕಾಲು ಹಿಡಿಯಲು ಮುಂದಾದ ವಿಚಿತ್ರ ಘಟನೆ ಬುಧವಾರ ಬಿಹಾರದ ರಾಜಧಾನಿ ಪಟನಾದಲ್ಲಿ ನಡೆದಿದೆ.

ಪಟನಾ: ಕಾಲಮಿತಿಯಲ್ಲಿ ಕೆಲಸ ಮಾಡುವಂತೆ ಆದೇಶಿಸುವ ಅಧಿಕಾರ ಹೊಂದಿರುವ ಮುಖ್ಯಮಂತ್ರಿಯೇ ಖಾಸಗಿ ಕಂಪನಿ ಅಧಿಕಾರಿಯೊಬ್ಬರ ಕಾಲು ಹಿಡಿಯಲು ಮುಂದಾದ ವಿಚಿತ್ರ ಘಟನೆ ಬುಧವಾರ ಬಿಹಾರದ ರಾಜಧಾನಿ ಪಟನಾದಲ್ಲಿ ನಡೆದಿದೆ.

ಬುಧವಾರ ಇಲ್ಲಿ ಆಯೋಜಿತವಾಗಿದ್ದ ರಸ್ತೆ ವಿಸ್ತರಣಾ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಈ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಬಳಿಕ ಇದ್ದಕ್ಕಿದ್ದಂತೆ ಕುರ್ಚಿಯಿಂದ ಎದ್ದುನಿಂತ ನಿತೀಶ್‌ ಸಮೀಪದಲ್ಲೇ ಕುಳಿತಿದ್ದ ರಸ್ತೆ ನಿರ್ಮಾಣದ ಹೊಣೆ ಹೊತ್ತಿರುವ ಖಾಸಗಿ ಕಂಪನಿಯ ಅಧಿಕಾರಿ ಬಳಿ ಮುಖಮಾಡಿ ಕೈಮುಗಿದು, ನೀವು ಹೇಳಿದರೆ ಬೇಕಾದರೆ ನಿಮ್ಮ ಕಾಲು ಹಿಡಿಯಲೂ ನಾನು ಸಿದ್ಧ ಎಂದು ಬಗ್ಗಿದ್ದರು.

ಸ್ವತಃ ಮುಖ್ಯಮಂತ್ರಿಗಳ ಇಂಥ ನಡವಳಿಕೆಯಿಂದ ದಿಗ್ಭ್ರಮೆಗೊಂಡ ಅಧಿಕಾರಿ ಮುಜುಗರಗೊಂಡು ನಿತೀಶ್‌ರತ್ತ ಕೈಮುಗಿದಿದ್ದೂ ಅಲ್ಲದೆ ಅವರನ್ನು ಕಾಲಿಗೆ ಬೀಳದಂತೆ ತಡೆದರು. ಈ ವೇಳೆ ವೇದಿಕೆಯಲ್ಲಿದ್ದ ಸಂಸದ ರವಿಶಂಕರ್‌ ಪ್ರಸಾದ್ ಮತ್ತು ಇತರೆ ಹಲವು ಸಚಿವರು ಕೂಡಾ ಒಮ್ಮೆ ಘಟನೆಯಿಂದ ಅವಕ್ಕಾದರು.

ಕೆಲ ದಿನಗಳ ಹಿಂದೆ ಕೂಡಾ ಸಿಎಂ ನಿತೀಶ್‌ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರ ಬಳಿಯೂ ಇದೇ ರೀತಿ ನಡೆದುಕೊಂಡಿದ್ದರು.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ತೇಜಸ್ವಿ ಯಾದವ್‌, ಸಿಎಂ ನಿತೀಶ್‌ ದುರ್ಬಲ ವ್ಯಕ್ತಿ. ಅವರ ಬಳಿ ಅಧಿಕಾರವೇ ಇಲ್ಲ. ಹೀಗಾಗಿಯೇ ಅವರು ಸದಾ ಅಧಿಕಾರಿಗಳ ಬಳಿ ಮಂಡಿ ಊರಲು ಮುಂದಾಗುತ್ತಾರೆ ಎಂದು ಕಿಡಿಕಾರಿದ್ದಾರೆ.

ಮುಂದಿನ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಿಹಾರ ವಿಧಾನಸಭೆಯ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಸರ್ಕಾರದ ಮುಂದಿದೆ. ಈ ಹಿನ್ನೆಲೆಯಲ್ಲಿ ಗಂಗಾ ಪಥದ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ನಿತೀಶ್ ಅಧಿಕಾರಿಗಳಿಗೆ ಈ ರೀತಿಯಲ್ಲಿ ಮನವಿ ಮಾಡಿದ್ದಾರೆ.