ಹಿಂದೂಗಳೇ ಮೈನಾರಿಟಿ ಆಗ್ತಾರೆ: ಹೈಕೋರ್ಟ್‌ ಕಿಡಿ

| Published : Jul 03 2024, 12:17 AM IST

ಹಿಂದೂಗಳೇ ಮೈನಾರಿಟಿ ಆಗ್ತಾರೆ: ಹೈಕೋರ್ಟ್‌ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮತಾಂತರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲಹಾಬಾದ್‌ ಹೈಕೋರ್ಟ್‌, ‘ಹೀಗೇ ಮತಾಂತರ ಮುಂದುವರಿಯುತ್ತಾ ಹೋದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದೆ.

ಪ್ರಯಾಗರಾಜ್: ಮತಾಂತರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲಹಾಬಾದ್‌ ಹೈಕೋರ್ಟ್‌, ‘ಹೀಗೇ ಮತಾಂತರ ಮುಂದುವರಿಯುತ್ತಾ ಹೋದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದೆ.

ಹಲವು ಹಿಂದೂ ಧರ್ಮೀಯ ಗ್ರಾಮಸ್ಥರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ ಆರೋಪ ಹೊತ್ತಿರುವ ಕೈಲಾಸ್‌ ಎಂಬುವನ ಜಾಮೀನು ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಪೀಠ, ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಭಾರತವಾಸಿಗಳ ಧರ್ಮವನ್ನು ಬದಲಿಸುವಂತಹ ಧಾರ್ಮಿಕ ಸಭೆಗಳನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಇಂದು ಬಹುಸಂಖ್ಯಾತರಾಗಿರುವವರು ಮುಂದೊಂದು ದಿನ ಅಲ್ಪಸಂಖ್ಯಾತರಾಗುತ್ತಾರೆ. ಪ್ರಚಾರ ಎಂದರೆ ಧರ್ಮವನ್ನು ಉತ್ತೇಜಿಸುವುದೇ ಹೊರತು ವ್ಯಕ್ತಿಗಳ ಧರ್ಮಪರಿವರ್ತಿಸುವುದಲ್ಲ’ ಎಂದು ಕೋರ್ಟ್‌ ಬುದ್ಧಿಮಾತು ಹೇಳಿದೆ.

‘ಮತಾಂತರಕ್ಕಾಗಿ ನಡೆಯುವ ಧಾರ್ಮಿಕ ಸಮಾವೇಶಗಳು ಸಂವಿಧಾನದ 25ನೇ ವಿಧಿಯ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವ ಕಾರಣ ಅವುಗಳನ್ನು ನಿಷೇಧಿಸಬೇಕು’ ಎಂದೂ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?:

‘ಉತ್ತರಪ್ರದೇಶದ ಹಲವು ಭಾಗಗಳಲ್ಲಿ ಬಡವರ ದಾರಿ ತಪ್ಪಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಕೆಲಸಗಳು ನಡೆಯುತ್ತಿವೆ. ನನ್ನ ಮಾನಸಿಕ ಅಸ್ವಸ್ಥ ಸಹೋದರನನ್ನು ದೆಹಲಿಗೆ ಕರೆದೊಯ್ದಿದ್ದು, ಆತ ನಂತರ ಮರಳಲಿಲ್ಲ’ ಎಂದು ರಾಮ್‌ಕಾಳಿ ಪ್ರಜಾಪತಿ ಎಂಬುವವರು ಕೈಲಾಸ್ ವಿರುದ್ಧ ದೂರು ದಾಖಲಿಸಿದ್ದರು. ಪ್ರಜಾಪತಿಯ ಸಹೋದರನಿಗೆ ಮತಾಂತರ ಆಗಿದ್ದಕ್ಕೆ ಪ್ರತಿಯಾಗಿ ಹಣವನ್ನು ಕೊಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.