ಸಾರಾಂಶ
ಚೆನ್ನೈ: ಮಲಯಾಳಂ ಚಿತ್ರರಂಗದಲ್ಲಿ ಗದ್ದಲ ಸೃಷ್ಟಿಸಿರುವ ಸೆಕ್ಸ್ ಹಗರಣ ಇದೀಗ ತಮಿಳಿನಲ್ಲೂ ಪ್ರತಿಧ್ವನಿಸಲಾರಂಭಿಸಿದೆ. ಜನಪ್ರಿಯ ನಟಿ ಸೌಮ್ಯಾ, ತಮಿಳು ನಿರ್ದೇಶಕನೊಬ್ಬ ನನ್ನನ್ನು ಲೈಂಗಿಕ ಗುಲಾಮಳಂತೆ ನಡೆಸಿಕೊಂಡಿದ್ದ ಎಂಬ ಆರೋಪ ಹೊರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸೌಮ್ಯಾ, ‘ರಂಗಭೂಮಿ ಕಲಾವಿದೆಯಾಗಿದ್ದ ನನಗೆ 18 ವರ್ಷದವಳಿದ್ದಾಗ ಚಿತ್ರದಲ್ಲಿ ನಟಿಸುವ ಅವಕಾಶ ಲಭಿಸಿತು. ನಟಿ ರೇವತಿಯ ಅಭಿಮಾನಿಯಾಗಿದ್ದ ನಾನು ತಮಿಳು ನಿರ್ದೇಶಕ ದಂಪತಿಯೊಂದಿಗೆ ನಟನಾ ಪರೀಕ್ಷೆಯಲ್ಲಿ ಭಾಗವಹಿಸಿದ್ದೆ. ಅದಕ್ಕಾಗಿ ಸಾಕಷ್ಟು ಹಣ ಖರ್ಚಾಗಿದೆ ಎಂದು ಹೇಳಿದ ಆತ, ನನ್ನನ್ನು ನಟನೆಯಲ್ಲಿ ತೊಡಗಿಸುವಂತೆ ನನ್ನ ಕುಟುಂಬಕ್ಕೆ ಒತ್ತಾಯಿಸಿದ್ದ. ಆದರೆ ನನಗೆ ಆತನೊಂದಿಗೆ ಹೊಂದಿಕೊಳ್ಳಲು ಆಗಿರಲಿಲ್ಲ’ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
‘ನಿರ್ದೇಶಕನ ಸ್ವಂತ ಮಗಳು ಆತನ ಮೇಲೆ ಅತ್ಯಾಚಾರ ಆರೋಪ ಹೊರಿಸಿ ಬೇರೆಯಾಗಿದ್ದಳು. ಆದರೆ ಇದನ್ನು ಅಲ್ಲಗಳೆದ ದಂಪತಿ, ನನ್ನನ್ನೇ ಅವರ ಮಗಳಂತೆ ಮಮತೆಯಿಂದ ನೋಡಿಕೊಂಡರು. ಕೆಲ ದಿನಗಳ ಬಳಿಕ ಇದ್ದಕ್ಕಿದ್ದಂತೆ ನನ್ನನ್ನು ಚುಂಬಿಸಿದ ನಿರ್ದೇಶಕ, ಕ್ರಮೇಣ ಅತ್ಯಾಚಾರವೆಸಗತೊಡಗಿದೆ. ಆತ ನನ್ನನ್ನು ಲೈಂಗಿಕ ಗುಲಾಮಳಂತೆ ಇರಿಸಿಕೊಂಡಿದ್ದ ಹಾಗೂ ನನ್ನಿಂದ ಮಗುವನ್ನು ಬಯಸಿದ್ದ’ ಎಂದು ಸೌಮ್ಯಾ ಹೇಳಿದ್ದಾರೆ.
ತಮಿಳು ನಿರ್ದೇಶಕನ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, ಮಲಯಾಳಂ ಚಿತ್ರರಂಗದ ಸೆಕ್ಸ್ ಹಗರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಪೊಲೀಸರ ಎದುರು ಆತನ ಹೆಸರು ಹೇಳುವುದಾಗಿ ತಿಳಿಸಿದ್ದಾರೆ.
ಬಳಿಕ ಮಲಯಾಳಂ ಚಿತ್ರದಲ್ಲಿ ನಟಿಸುವಾಗಲೂ ಸಹನಟರಿಂದ ಶೋಷಣೆಗೊಳಗಾಗಿದ್ದು, ಅವರ ಹೆಸರನ್ನು ನ್ಯಾ। ಹೇಮಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ.