ಸಾರಾಂಶ
56 ವರ್ಷಗಳ ಹಿಂದೆ ಹಿಮಾಚಲಪ್ರದೇಶದ ರೋಹ್ಟಂಗ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಕೇರಳ ಮೂಲದ ಯೋಧ ಥಾಮಸ್ ಚೆರಿಯನ್ ಅವರ ಮೃತದೇಹ ಇದೀಗ ಪತ್ತೆಯಾಗಿದೆ.
ಪಟ್ಟಣಂತಿಟ್ಟ: 56 ವರ್ಷಗಳ ಹಿಂದೆ ಹಿಮಾಚಲಪ್ರದೇಶದ ರೋಹ್ಟಂಗ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಕೇರಳ ಮೂಲದ ಯೋಧ ಥಾಮಸ್ ಚೆರಿಯನ್ ಅವರ ಮೃತದೇಹ ಇದೀಗ ಪತ್ತೆಯಾಗಿದೆ.
ಪಟ್ಟಣಂತಿಟ್ಟದ ಎಲಂಥೂರ್‌ನವರಾದ ಥಾಮಸ್ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಎನ್-12 ವಿಮಾನ ಹಿಮಾಚಲ ಪ್ರದೇಶದ ರೋಹ್ಟಂಗ್‌ನಲ್ಲಿ ಅಪಘಾತಕ್ಕೀಡಾಗಿತ್ತು. ಅಪಘಾತದ ವೇಳೆ ವಿಮಾನದಲ್ಲಿ 102 ಜನರಿದ್ದು ಇದುವರೆಗೂ ಕೇವಲ 9 ಶವಗಳು ಮಾತ್ರ ಪತ್ತೆಯಾಗಿತ್ತು. ಅಂದಿನಿಂದಲೂ ಹಿಮಾಚ್ಛಾದಿತ ಪ್ರದೇಶದಲ್ಲಿ ಸೇನೆ, ಮಡಿದವರ ಶವಗಳಿಗಾಗಿ ಹುಡುಕಾಟ ನಡೆಸುತ್ತಲೇ ಇದ್ದು, ಇದೀಗ ಥಾಮಸ್ ಅವರ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದಾಗ ಥೋಮಸ್‌ಗೆ ಕೇವಲ 22 ವರ್ಷ ವಯಸ್ಸಾಗಿತ್ತು. ತರಬೇತಿ ಮುಗಿಸಿ ಕರ್ತವ್ಯಕ್ಕೆ ಸೇರಲು ತೆರಳುತಿದ್ದ ವೇಳೆ 16000 ಅಡಿ ನಿರ್ಗಲ್ಲು ಪ್ರದೇಶದ ದುರ್ಗಮ ಕಣಿವೆಯೊಂದರ ಬಳಿ ವಿಮಾನ ಅಪಘಾತವಾಗಿತ್ತು. 2003ರಲ್ಲಿ ಮೊದಲ ಬಾರಿಗೆ ವಿಮಾನದ ಅವಶೇಷ ಪತ್ತೆಯಾದ ಬಳಿಕ ಅಲ್ಲಿ ಹುಡುಕಾಟ ಆರಂಭಿಸಲಾಗಿತ್ತು. ಇದೀಗ ಸೇನೆಯ ಡೋಗ್ರಾ ಸ್ಕೌಟ್ಸ್ ಮತ್ತು ತಿರಂಗಾ ಪರ್ವತ ರಕ್ಷಣಾ ತಂಡದ ನೇತೃತ್ವದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಇದೀಗ 4 ದೇಹಗಳು ಪತ್ತೆಯಾಗಿವೆ. ಈ ವೇಳೆ ದೊರೆತ ದಾಖಲೆಗಳ ಸಹಾಯದಿಂದ ಮೃತರನ್ನು ಗುರುತಿಸಲಾಗಿದೆ. ಅಗತ್ಯ ವಿಧಿವಿಧಾನ ಪೂರ್ಣಗೊಂಡ ನಂತರ ಥೋಮಸ್ ದೇಹವನ್ನು ಅವರ ಪರಿವಾರದವರಿಗೆ ಹಸ್ತಾಂತರಿಸಲಾಗುವುದು. ನಂತರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು. ಉಳಿದಿಬ್ಬರನ್ನು ಮಲ್ಖನ್ ಸಿಂಗ್ ಮತ್ತು ಸಿಪಾಯಿ ನಾರಾಯಣ್ ಸಿಂಗ್ ಎಂದು ಗುರುತಿಸಲಾಗಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ಥೋಮಸ್‌ರ ಒಡಹುಟ್ಟಿದವರು, ‘ದುಃಖ ಮತ್ತು ಸಂತಸ ಒಟ್ಟಿಗೆ ಆಗುತ್ತಿದೆ. ನಮ್ಮ ಸಹೋದರನಿಗೆ ಅಂತಿಮ ವಿದಾಯ ಹೇಳುವ ಅವಕಾಶ ಸಿಗಬಹುದೆಂದು ಅಂದುಕೊಂಡಿರಲಿಲ್ಲ’ ಎಂದು ಭಾವುಕರಾದರು.