ಸಾರಾಂಶ
ಕೋಲ್ಕತಾ: ‘ದೇಶಾದ್ಯಂತ ಪ್ರತಿದಿನ ಸುಮಾರು 90 ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು ಭಯಾನಕವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಘಾತ ವ್ಯಕ್ತಪಡಿಸಿದ್ದಾರೆ ಹಾಗೂ ‘ರೇಪ್ ಕೇಸುಗಳ ವಿಚಾರಣೆ 15 ದಿನದಲ್ಲಿ ಮುಗಿಯುವಂತಾಗಲು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಕೋಲ್ಕತಾ ವೈದ್ಯೆಯ ರೇಪ್ ಘಟನೆ ಬೆನ್ನಲ್ಲೇ ಮೋದಿಗೆ ಪತ್ರ ಬರೆದಿರುವ ಮಮತಾ, ‘ದೇಶಾದ್ಯಂತ ಅತ್ಯಾಚಾರ ಹೆಚ್ಚುತ್ತಿವೆ. ಲಭ್ಯವಿರುವ ಮಾಹಿತಿ ಪ್ರಕಾರ ನಿತ್ಯ ಸುಮಾರು 90 ಅತ್ಯಾಚಾರ ಪ್ರಕರಣ ಸಂಭವಿಸುತ್ತಿವೆ ಹಾಗೂ ಅನೇಕ ಪ್ರಕರಣಗಳಲ್ಲಿ ಅತ್ಯಾಚಾರ ಬಳಿಕ ಕೊಲೆಗಳು ಸಂಭವಿಸುತ್ತಿವೆ. ಇದು ಭಯಾನಕ ಹಾಗೂ ರಾಷ್ಟ್ರದ ಆತ್ಮಸಾಕ್ಷಿಯನ್ನು ಅಲುಗಾಡಿಸುತ್ತದೆ, ಇದನ್ನು ಕೊನೆಗಾಣಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಇದರಿಂದ ಮಹಿಳೆಯರು ಸುರಕ್ಷಿತವಾಗಿರುತ್ತಾರೆ’ ಎಂದಿದ್ದಾರೆ.
‘ಇಂತಹ ಘೋರ ಅಪರಾಧಗಳಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ಶಿಕ್ಷೆ ಕಠಿಣವಾಗಬೇಕು. ತ್ವರಿತ ನ್ಯಾಯ ಖಚಿತಪಡಿಸಿಕೊಳ್ಳಲು 15 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು’ ಎಂದು ವಿನಂತಿಸಿದ್ದಾರೆ.
ಸುಪ್ರೀಂ ಭರವಸೆ: ಏಮ್ಸ್ ವೈದ್ಯರ 11 ದಿನದ ಮುಷ್ಕರ ವಾಪಸ್
ನವದೆಹಲಿ: ಕೋಲ್ಕತಾ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ವಿರೋಧಿಸಿ ಪ್ರತಿಭಟನೆಗಿಳಿದಿದ್ದ ದೆಹಲಿಯ ಏಮ್ಸ್ ಹಾಗೂ ಆರ್‌ಎಮ್‌ಎಲ್ ಆಸ್ಪತ್ರೆಯ ಸ್ಥಾನಿಕ ವೈದ್ಯರು 11 ದಿನಗಳ ಮುಷ್ಕರವನ್ನು ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ. ಪ್ರತಿಭಟನಾನಿರತ ವೈದ್ಯರಿಗೆ ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡಿದ್ದ ಸುಪ್ರೀಂ ಕೋರ್ಟ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂಬ ಭರವಸೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ತನ್ನ ಈ ನಿರ್ಧಾರದ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ದೆಹಲಿ ಏಮ್ಸ್‌ನ ಸ್ಥಾನಿಕ ವೈದ್ಯರ ಸಂಘ, ‘ಆರ್‌ಜಿ ಕರ್ ಪ್ರಕರಣದಲ್ಲಿ ಮದ್ಯಪ್ರವೇಶಿಸಿದ ಸುಪ್ರೀಂ ಕೊರ್ಟ್ ವೈದ್ಯರ ಸುರಕ್ಷತೆಯ ಭರವಸೆ ನೀಡಿರುವ ಕಾರಣ ನಾವು ಕರ್ತವ್ಯಕ್ಕೆ ಮರಳುತ್ತಿದ್ದೇವೆ.
ನ್ಯಾಯಾಲಯದ ಈ ಕ್ರಮವನ್ನು ಶ್ಲಾಘಿಸುತ್ತೇವೆ ಹಾಗೂ ಅದರ ನಿರ್ದೇಶನಗಳನ್ನು ಅನುಸರಿಸುವಂತೆ ಕರೆ ನೀಡುತ್ತೇವೆ. ರೋಗಿಗಳ ಆರೈಕೆಯೇ ನಮ್ಮ ಆದ್ಯತೆಯಾಗಿರಲಿದೆ’ ಎಂದು ಬರೆದುಕೊಂಡಿದೆ. ಅಂತೆಯೇ ಆರ್‌ಎಮ್‌ಎಲ್ ಆಸ್ಪತ್ರೆಯ ವೈದ್ಯರು ಕೂಡ ಶುಕ್ರವಾರ ಬೆಳಗ್ಗೆ 8ರಿಂದ ಕರ್ತವ್ಯಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
ವೈದ್ಯೆ ಮೇಲೆ ಗ್ಯಾಂಗ್‌ರೇಪ್ ಆಗಿಲ್ಲ: ಸಿಬಿಐ ತನಿಖೆಯಲ್ಲಿ ವ್ಯಕ್ತ
ಕೋಲ್ಕತಾ: 31ರ ಹರೆಯದ ಕೋಲ್ಕತಾ ವೈದ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಲ್ಲಿಯವರೆಗೆ ನಡೆಸಿರುವ ತನಿಖೆ ಪ್ರಕಾರ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ತಿಳಿದುಬಂದಿದೆ ಎಂದು ಮೂಲಗಳು ಹೇಳಿವೆ.ವೈದ್ಯೆ ದೇಹದಲ್ಲಿ 150 ಮಿಲಿಗ್ರಾಂ ವೀರ್ಯ ಇತ್ತು. ಇಷ್ಟೊಂದು ಗಮನಾರ್ಹ ಪ್ರಮಾಣದ ವೀರ್ಯ ಇರುವ ಕಾರಣ ಇದು ಗ್ಯಾಂಗ್‌ರೇಪ್ ಎಂದು ವೈದ್ಯೆಯ ತಂದೆ ಆರೋಪಿಸಿದ್ದರು.
ಫೋರೆನ್ಸಿಕ್ ವರದಿಯು ಬಂಧಿತ ಆರೋಪಿ ಸಂಜಯ ರಾಯ್ ಮಾತ್ರ ವೈದ್ಯೆಯ ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದು ಸೂಚಿಸಿದೆ. ಡಿಎನ್‌ಎ ವರದಿ ಕೂಡ ಒಬ್ಬ ವ್ಯಕ್ತಿಯ ಭಾಗೀದಾರಿಕೆ ದೃಢಪಡಿಸಿದೆ ಎಂದು ಸಿಬಿಐ ಮೂಲಗಳು ಹೇಳಿವೆ.