ಕಾಂಗ್ರೆಸ್‌ 40 ಸೀಟು ಗೆಲ್ಲೋದು ಅನುಮಾನ: ಮಮತಾ ಚಾಟಿ

| Published : Feb 03 2024, 01:48 AM IST

ಸಾರಾಂಶ

ತಾಕತ್ತಿದ್ದರೆ ವಾರಾಣಸಿಯಲ್ಲಿ ಗೆಲ್ಲಿ ಎಂದು ಕಾಂಗ್ರೆಸಿಗರಿಗೆ ಮಮತಾ ಸಡ್ಡು ಹಾಕಿದ್ದಾರೆ

ಕೋಲ್ಕತಾ: ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ದೇಶಾದ್ಯಂತ ಕೇವಲ 40 ಸ್ಥಾನಗಳನ್ನು ಗೆಲ್ಲುವುದೂ ನನಗೆ ಅನುಮಾನ ಎಂದು ಪ.ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚಾಟಿ ಬೀಸಿದ್ದಾರೆ. ಇದರೊಂದಿಗೆ ಇಂಡಿಯಾ ಕೂಟದಲ್ಲಿನ ಒಡಕು ಮತ್ತೊಮ್ಮೆ ಬಯಲಾಗಿದೆ.

ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮಾತನಾಡಿದ ಮಮತಾ ‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ 300 ಸ್ಥಾನಗಳಲ್ಲಿ ಕಾಂಗ್ರೆಸ್‌ 40 ಸೀಟುಗಳನ್ನು ಗೆಲ್ಲುತ್ತಾ ಎಂಬುದು ನನಗೆ ಗೊತ್ತಿಲ್ಲ. ಕಾಂಗ್ರೆಸ್, ನಿಮಗೆ ಯಾಕಿಷ್ಟು ದುರಹಂಕಾರ? ನೀವು ಯಾತ್ರೆ ನಡೆಸುತ್ತ ಬಂಗಾಳಕ್ಕೆ ಬಂದಿದ್ದೀರಿ. ನಿಮಗೆ ತಾಕತ್ತಿದ್ದರೆ ವಾರಾಣಸಿಯಲ್ಲಿ ಬಿಜೆಪಿಯನ್ನು ಸೋಲಿಸಿ ಗೆದ್ದು ತೋರಿಸಿ. ಈ ಹಿಂದೆ ಗೆದ್ದಿರುವ ಸ್ಥಾನಗಳನ್ನೂ ನೀವು ಈ ಬಾರಿ ಕಳೆದುಕೊಳ್ಳಲಿದ್ದೀರಿ’ ಎಂದು ತೀವ್ರವಾಗಿ ಕಿಡಿಕಾರಿದರು.