ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್‌ಪಿಜಿ ಬೆಲೆ ₹2000ಕ್ಕೆ: ಮಮತಾ

| Published : Mar 01 2024, 02:17 AM IST / Updated: Mar 01 2024, 08:17 AM IST

ಸಾರಾಂಶ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸಿಲಿಂಡರ್‌ ದರವನ್ನು ಎರಡು ಸಾವಿರ ರುಪಾಯಿವರೆಗೂ ಹೆಚ್ಚಳ ಮಾಡುವುದಾಗಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಝಾರ್‌ಗ್ರಾಮ (ಪಶ್ಚಿಮ ಬಂಗಾಳ): ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಅಡುಗೆ ಅನಿಲದ ಸಿಲಿಂಡರ್‌ ಬೆಲೆ 2000 ರು.ಗೆ ಹೆಚ್ಚಳವಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಎಚ್ಚರಿಸಿದ್ದಾರೆ.

ಜಿಲ್ಲೆಯ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ, ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೆ ಅಡುಗೆ ಅನಿಲದ ಸಿಲಿಂಡರ್‌ ಮೌಲ್ಯ 1,500 ರು. ನಿಂದ 2,000 ರು.ನಷ್ಟು ಏರಲಿದೆ. ಈ ಹೆಚ್ಚಳ ಮತ್ತೆ ಮುಂದುವರಿಯಲಿದೆ. ನಾವು ಮತ್ತೆ ಮರಗಳನ್ನು ತಂದು ಸೌದೆ ಒಲೆ ಬಳಸುತ್ತಿದ್ದ ಪರಿಸ್ಥಿತಿಗೆ ಮರಳಬೇಕಾಗುತ್ತದೆ’ ಎಂದರು.

ಆವಾಸ್‌ ಯೋಜನೆಯಡಿ ಕೈಗೊಂಡಿರುವ ಮನೆಗಳ ನಿರ್ಮಾಣವನ್ನು ಏಪ್ರಿಲ್‌ ಒಳಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮೇನಿಂದ ತಮ್ಮ ಸರ್ಕಾರ ನಿರ್ಮಾಣ ಕಾಮಗಾರಿ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.