ಪ್ರಧಾನಿ ಮೋದಿಗೆ ಕೈಯ್ಯಾರೆ ಅಡುಗೆ ಮಾಡುವೆ: ಮಮತಾ

| Published : May 15 2024, 01:38 AM IST

ಸಾರಾಂಶ

ತೇಜಸ್ವಿ ಯಾದವ್‌ ಕುಟುಕಿದ ಪ್ರಧಾನಿಗೆ ಟಾಂಗ್‌ ನೀಡಿದ ಮಮತಾ ತಾವೇ ಅಡುಗೆ ಮಾಡಿ ಬಡಿಸಿದರೂ ಪ್ರಧಾನಿ ಅದನ್ನು ತಿನ್ನಲು ಮೀನಮೇಷ ಎಣಿಸುತ್ತಾರೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

ಕೋಲ್ಕತಾ: ನವರಾತ್ರಿ ವೇಳೆ ಮೀನು ತಿಂದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರನ್ನು ಚುನಾವಣೆ ಸಮಯದ ಸನಾತನಿ ಎಂದು ಟೀಕಿಸಿದ್ದ ಪ್ರಧಾನಿ ಮೋದಿಗೆ, ಬಂಗಾಳ ಸಿಎಂ ಮಮತಾ ಟಾಂಗ್‌ ನೀಡಿದ್ದಾರೆ. ತೇಜಸ್ವಿ ಹಬ್ಬದ ಸಂದರ್ಭದಲ್ಲಿ ಮಾಂಸಾಹಾರ ತಿಂದಿದ್ದಕ್ಕೆ ಆಕ್ಷೇಪ ಮಾಡಿದ್ದ ಪ್ರಧಾನಿ ಮೋದಿಗೆ ಅಡುಗೆ ಮಾಡಿ ಬಡಿಸುವೆ. ಆದರೆ ನಾನು ಮಾಡಿದ ಅಡುಗೆಯನ್ನು ಸೇವಿಸಲು ಪ್ರಧಾನಿ ಒಪ್ಪುವರೇ ಎಂದು ಮಮತಾ ಪ್ರಶ್ನಿಸಿದ್ದಾರೆ.

ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮಮತಾ, ‘ಬಿಜೆಪಿ ನಾಯಕರು ದೇಶದ ಜನರ ಆಹಾರಕ್ರಮದ ಕುರಿತು ಆಕ್ಷೇಪ ಮಾಡುತ್ತಾರೆ. ಭಾರತ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಹೊಂದಿದೆ. ನಾನೂ ಸಹ ಪ್ರಧಾನಿ ಮೋದಿಗೆ ಅಡುಗೆ ಮಾಡಿ ಬಡಿಸುತ್ತೇನೆ. ಆದರೆ ನಾನು ಮಾಡಿ ಬಡಿಸಿದ ಅಡುಗೆಯನ್ನು ತಿನ್ನಲು ಪ್ರಧಾನಿ ಒಪ್ಪುವರೇ?’ ಎಂಬುದಾಗಿ ಪ್ರಶ್ನಿಸಿದ್ದಾರೆ.

ಬಿಜೆಪಿ, ಸಿಪಿಎಂ ಆಕ್ಷೇಪ: ಮಮತಾ ಅಡುಗೆ ಹೇಳಿಕೆಗೆ ಬಿಜೆಪಿ, ಸಿಪಿಎಂ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿ ಮಾಂಸಾಹಾರಿ ಅಲ್ಲವೆಂದು ಗೊತ್ತಿದ್ದೇ ಮಮತಾ ಅಡುಗೆ ಮಾಡಿ ಬಡಿಸುವ ಮಾತನ್ನಾಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ತಥಾಗತ ರಾಯ್‌ ಆಕ್ಷೇಪಿಸಿದ್ದರೆ, ಮೋದಿಭಾಯಿ-ದೀದಿಭಾಯಿ ಎಂಬ ಹೇಳಿಕೆ ಸತ್ಯ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಎಂಬುದಾಗಿ ಸಿಪಿಎಂ ನಾಯಕ ವಿಕಾಶ್‌ ಭಟ್ಟಾಚಾರ್ಯ ವ್ಯಂಗ್ಯವಾಡಿದ್ದಾರೆ.