ಸಾರಾಂಶ
ಮುಂಬೈ: ಕಲ್ಲಿಕೋಟೆಯಿಂದ ಬಹ್ರೇನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಯುವಕ ಅಬ್ದುಲ್ ಮುಸಾವಿರ್ ನಡುಕಂಡಿ (25) ಕಲ್ಲಿಕೋಟೆಯಿಂದ ವಿಮಾನ ಟೇಕಾಫ್ ಆಗುವಾಗ ಎಚ್ಚರಗೊಂಡು ತಕ್ಷಣವೇ ವಿಮಾನದ ಹಿಂಭಾಗಕ್ಕೆ ತೆರಳಿ ಅಲ್ಲಿ ಕ್ಯಾಬಿನ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ವಿಮಾನವನ್ನು ಮುಂಬೈನಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾಯಿತು. ಆ ಸಂದರ್ಭದಲ್ಲಿ ಈ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೆ ಎರಡು ವಿಮಾನಗಳಲ್ಲಿ ಬಾಂಬ್ ಭೀತಿ
ಮುಂಬೈ/ಚೆನ್ನೈ: ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕುವ ಘಟನೆಗಳು ಸೋಮವಾರವೂ ಮುಂದುವರಿದಿವೆ. ಈ ದಿನ ಎರಡು ವಿಮಾನಗಳಲ್ಲಿ ಬಾಂಬ್ ಭೀತಿ ಸೃಷ್ಟಿಯಾಗಿದೆ.ದೆಹಲಿ-ಮುಂಬೈ ಅಕಾಸಾ ಏರ್ ವಿಮಾನದಲ್ಲಿ ಭದ್ರತಾ ಎಚ್ಚರಿಕೆಯಿಂದ ದೆಹಲಿಯಿಂದ ಮುಂಬೈಗೆ ಹೋಗಬೇಕಿದ್ದ ವಿಮಾನವನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾಯಿತು. ನಂತರ ವಿಮಾನವನ್ನು ಪರಿಶೀಲಿಸಿ ಸುರಕ್ಷತೆ ಖಚಿತಪಡಿಸಿಕೊಳ್ಳಲಾಯಿತು.
ಅದೇ ರೀತಿ ಚೆನ್ನೈನಿಂದ ಕೋಲ್ಕತಾಗೆ ಹೋಗುವ ಇಂಡಿಗೋ ವಿಮಾನದಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂಬ ಬೆದರಿಕೆ ಕರೆ ಬಂದ ಕಾರಣ ವಿಮಾನ ಹಾರಾಟ 2 ಗಂಟೆ ವಿಳಂಬವಾಯಿತು. ಬಾಂಬ್ ಬೆದರಿಕೆ ಇರುವುದರಿಂದ ಚೆನ್ನೈನಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ವಿಮಾನ ತಪಾಸಣೆ ಮಾಡಿದರು. ಆಗ ಇದು ಹುಸಿ ಕರೆ ಎಂದು ಗೊತ್ತಾಯಿತು.