ಸಾರಾಂಶ
ರಾಂಚಿ: ನ.13 ಹಾಗೂ ನ.20ರಂದು ವಿಧಾನಸಭೆ ಚುನಾವಣೆ ನಡೆಯುತ್ತಿರುವ ಜಾರ್ಖಂಡ್‌ನಲ್ಲಿ ಕಾಂಗ್ರೆಸ್-ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ (ಕಾಂಗ್ರೆಸ್, ಜೆಎಂಎಂ, ಆರ್‌ಜೆಡಿ, ಸಿಪಿಐ-ಎಂ) 7 ಗ್ಯಾರಂಟಿಗಳ ಭಸವರಸೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಹೇಮಂತ್ ಸೊರೇನ್ ಸಮ್ಮುಖದಲ್ಲಿ ಇವನ್ನು ಬಿಡುಗಡೆ ಮಾಡಲಾಯಿತು.7 ಗ್ಯಾರಂಟಿಗಳು:-ಮಯ್ಯಾ ಸಮ್ಮಾನ್ ಯೋಜನೆ: ಪ್ರಸ್ತುತ ಮಹಿಳೆಯರಿಗೆ ನೀಡಲಾಗುತ್ತಿರುವ 1,000 ರು. ಗೌರವಧನ 2,500 ರು.ಗೆ ಹೆಚ್ಚಳ
-ಸಾಮಾಜಿಕ ನ್ಯಾಯದ ಖಾತರಿ: ಎಸ್‌ಟಿ ಶೇ.28, ಎಸ್‌ಸಿ ಶೇ.12, ಒಬಿಸಿ ಶೇ. 27 ಮೀಸಲಾತಿ- ಆಹಾರ ಭದ್ರತೆಯ ಭರವಸೆ: ಪ್ರತಿ ವ್ಯಕ್ತಿಗೆ 7 ಕೆಜಿ ಪಡಿತರ ವಿತರಣೆ, 450 ರು.ಗೆ ಗ್ಯಾಸ್ ಸಿಲಿಂಡರ್
- ಉದ್ಯೋಗ ಮತ್ತು ಆರೋಗ್ಯ ಭದ್ರತೆಯ ಭರವಸೆ: ರಾಜ್ಯದ 10 ಲಕ್ಷ ಯುವಕರಿಗೆ ಉದ್ಯೋಗ, 15 ಲಕ್ಷ ರು. ವರೆಗಿನ ಆರೋಗ್ಯ ವಿಮೆ-ಶಿಕ್ಷಣ ಖಾತರಿ: ಶಾಲಾ ಶಿಕ್ಷಣ ಉಚಿತ
- ರೈತ ಕಲ್ಯಾಣದ ಭರವಸೆ: ಕನಿಷ್ಠ ಬೆಂಬಲ ಬೆಲೆ 2,400 ರು. ನಿಂದ 3,000 ರು.ಗೆ ಹೆಚ್ಚಳ- ಸರನಾ ಸಮುದಾಯಕ್ಕೆ ಧರ್ಮದ ಸ್ಥಾನಮಾನ ಒದಗಿಸುವ ಸರನಾ ಧರ್ಮ ಕೋಡ್ ಜಾರಿ
==ಮೋದಿ ಸುಳ್ಳಿನ ಸರದಾರ: ಖರ್ಗೆ ವಾಗ್ದಾಳಿರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸುಳ್ಳಿನ ಸರದಾರ’ ಎಂದು ಕರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯು ಜಾರ್ಖಂಡ್‌ನ ಇದ್ದಲು ಹಾಗೂ ಖನಿಜಗಳನ್ನು ಲೂಟಿ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜಾರ್ಖಂಡ್ ವಿಧಾನಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಸಮಾವೇಶದಲ್ಲಿ ಸೋಮವಾರ ಮಾತನಾಡಿದ ಖರ್ಗೆ, ‘ಸುಳ್ಳಿನ ಸರದಾರರಾದ ಪ್ರಧಾನಿ ಮೋದಿ ಯುವಕರಿಗೆ 2 ಕೋಟಿ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಅದನ್ನು ನೆರವೇರಿಸಲಿಲ್ಲ. ಲೂಟಿಕೋರ ಬಿಜೆಪಿಯ ಉದ್ದೇಶವು ಜನರ ಕಲ್ಯಾಣವಲ್ಲ. ಒಳನುಸುಳುವಿಕೆಯ ಬಗ್ಗೆ ಮಾತನಾಡುವ ಅವರು, ಕೇಂದ್ರ ಹಾಗೂ ಅಸ್ಸಾಂನಲ್ಲಿರುವ ತಮ್ಮ ಸರ್ಕಾರದ ಅಧಿಕಾರ ಬಳಸಿ ಅಕ್ರಮ ವಲಸಿಗರನ್ನು ಏಕೆ ತಡೆಯುವುದಿಲ್ಲ?’ ಎಂದು ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ರಾಜ್ಯದ ಇದ್ದಲಿಗೆ 1.36 ಲಕ್ಷ ಕೋಟಿ ಪಾವತಿಸಬೇಕು ಎಂದು ಆಗ್ರಹಿಸಿದರು.ಅಂತೆಯೇ, ಚುನಾವಣೆ ಎದುರಿಸಲಿರುವ ಜಾರ್ಖಂಡ್‌ನಲ್ಲಿ ಬುಡಕಟ್ಟು ಸಿಎಂ ಹೇಮಂತ್ ಸೊರೇನ್‌ರಿಂದ ಅಧಿಕಾರ ಕಸಿಯಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದ ಖರ್ಗೆ, ಮುಂದಿನ ಬಾರಿಯೂ ಸೊರೇನ್ ಅವರೇ ಸಿಎಂ ಆಗುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
==
ಸಿ-ಗ್ರೇಡ್ ಸಿನಿಮಾ ವಿಲನ್ ಥರ ಮೋದಿ ಮಾತು: ಕಾಂಗ್ರೆಸ್
ನವದೆಹಲಿ: ಇಂಡಿಯಾ ಕೂಟವನ್ನು ‘ನುಸುಳುಕೋರರ ಮೈತ್ರಿಕೂಟ’ ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ‘ಪ್ರಧಾನಿ ಹುದ್ದೆಯಲ್ಲಿರುವವರು ಸಿ-ಗ್ರೇಡ್ (ಕಳಪೆ) ಹಿಂದಿ ಸಿನಿಮಾದ ಖಳನಾಯಕನ ಬಾಯಲ್ಲಿ ಬರುವಂಥ ಮಾತು ಆಡುವುದು ಶೋಭೆಯಲ್ಲ’ ಎಂದು ತಿರುಗೇಟು ನೀಡಿದೆ.ಕಾಂಗ್ರೆಸ್ ವಕ್ತಾರ ಪವನ್ ಖೇರಾ ಮಾತನಾಡಿ, ‘ಚುನಾವಣೆ ಎದುರಿಸುತ್ತಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಸೋಲಿನ ಭೀತಿಯಿಂದಾಗಿ ಪ್ರಧಾನಿ ಮೋದಿಯವರ ಭಾಷೆಯ ಗುಣಮಟ್ಟ ಕುಸಿಯುತ್ತಿದೆ. ಇಂಡಿಯಾ ಕೂಟ ಅಧಿಕಾರಕ್ಕೇರಿದರೆ ಮಹಿಳೆಯರ ಮಂಗಳಸೂತ್ರ ಕಸಿಯುತ್ತದೆ ಎನ್ನುತ್ತಿದ್ದ ಅವರು ಈಗ ನಿಮ್ಮ ಪುತ್ರಿಯರು ಹಾಗೂ ಆಹಾರವನ್ನು ಕಸಿಯುತ್ತದೆ ಎನ್ನುತ್ತಿದ್ದಾರೆ. ನಮ್ಮದು ‘ನುಸುಳುಕೋರರ ಮೈತ್ರಿಕೂಟ’ ಎಂದು ಹೆಸರಿಸಿರುವ ಪ್ರಧಾನಿಯವರ ಅಡಿಯಲ್ಲೇ ಗಡಿ ಭದ್ರತೆಯ ವಿಷಯ ಬರುತ್ತದೆ’ ಎಂದಿದ್ದಾರೆ.ಜೊತೆಗೆ, ನಿಮ್ಮ ಭಾಷೆಯನ್ನು ಸುಧಾರಿಸಿಕೊಂಡು ಉಳಿದಿರುವ ಅಧಿಕಾರಾವಧಿಯಲ್ಲಿ ಮರ್ಯಾದೆಯನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.