ಮಣಿಪಾಲದಲ್ಲಿ ಓದಿದ್ದ ದೀಪಕ್‌ ಬಿಹಾರ ಸಚಿವ

| Published : Nov 23 2025, 02:00 AM IST

ಸಾರಾಂಶ

ಬಿಹಾರದಲ್ಲಿ ಶಾಸಕರೇ ಅಲ್ಲದ ರಾಷ್ಟ್ರೀಯ ಲೋಕ ಮೋರ್ಚಾ ಯುವ ಮುಖಂಡ ಹಾಗೂ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಅವರ ಪುತ್ರ ದೀಪಕ್ ಪ್ರಕಾಶ್ ಅವರು ಇತ್ತೀಚೆಗೆ ನಿತೀಶ್ ಕುಮಾರ್‌ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದರು. ಇವರು ಕರ್ನಾಟಕದ ಮಣಿಪಾಲದಲ್ಲಿ ಬಿ-ಟೆಕ್ ಓದಿದ್ದರು ಎಂಬುದು ವಿಶೇಷ.

- ದಿಢೀರ್‌- 2011ರಲ್ಲಿ ಮಣಿಪಾಲದಲ್ಲಿ ಬಿ-ಟೆಕ್‌ ಪದವಿ- 4 ವರ್ಷ ಟೆಕ್ಕಿ, ನಂತರ ಸಮಾಜಸೇವೆ

---

ಚುನಾವಣೆಗೇ ನಿಲ್ಲದೇ ಇತ್ತೀಚೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೀಪಕ್‌ ಪ್ರಕಾಶ್‌

ಮಣಿಪಾಲ ಎಂಐಟಿನಲ್ಲಿ ಪದವಿ ಪಡೆದು 4 ವರ್ಷ ಟೆಕ್ಕಿಯಾಗಿದ್ದ ದೀಪಕ್‌ ಬಳಿಕ ರಾಜಕೀಯಕ್ಕೆ

ದೀಪಕ್‌ರ ತಂದೆ ಉಪೇಂದ್ರ ಕುಶ್ವಾಹಾ ಆರ್‌ಎಲ್‌ಎಂ ಪಕ್ಷದ ಅಧ್ಯಕ್ಷ, ತಾಯಿ ಕೂಡಾ ಶಾಸಕಿ

==ಪಟನಾ: ಬಿಹಾರದಲ್ಲಿ ಶಾಸಕರೇ ಅಲ್ಲದ ರಾಷ್ಟ್ರೀಯ ಲೋಕ ಮೋರ್ಚಾ ಯುವ ಮುಖಂಡ ಹಾಗೂ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಅವರ ಪುತ್ರ ದೀಪಕ್ ಪ್ರಕಾಶ್ ಅವರು ಇತ್ತೀಚೆಗೆ ನಿತೀಶ್ ಕುಮಾರ್‌ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದರು. ಇವರು ಕರ್ನಾಟಕದ ಮಣಿಪಾಲದಲ್ಲಿ ಬಿ-ಟೆಕ್ ಓದಿದ್ದರು ಎಂಬುದು ವಿಶೇಷ.

ಉಪೇಂದ್ರ ಕುಶ್ವಾಹಾ ಪತ್ನಿ ಶಾಸಕಿ ಆಗಿದ್ದು, ಅವರಿಗೆ ಸಚಿವ ಪಟ್ಟ ಸಿಗಬಹುದು ಎನ್ನಲಾಗಿತ್ತು. ಆದರೆ ಅವರು, ‘ಮಗನನ್ನು ಮಂತ್ರಿ ಮಾಡಿ’ ಎಂದು ಕೋರಿದ್ದು ಕೆಲಸ ಮಾಡಿತು ಎನ್ನಲಾಗಿದ್ದು, ಹೀಗಾಗಿಯೇ ಶಾಸಕರೂ ಅಲ್ಲದ ದೀಪಕ್‌ಗೆ ಕೊನೇ ಕ್ಷಣದಲ್ಲಿ ಅದೃಷ್ಟ ಖುಲಾಯಿಸಿತು ಎನ್ನಲಾಗಿದೆ. ಆದ್ದರಿಂದ ಸರಿಯಾಗಿ ತಯಾರಾಗದೇ ಬಂದಿದ್ದ ದೀಪಕ್‌ ಜೀನ್ಸ್ ಪ್ಯಾಂಟ್‌ ಧರಿಸಿಯೇ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ದೀಪಕ್‌ ಶನಿವಾರ ಪಂಚಾಯತ್ ರಾಜ್ ಇಲಾಖೆಯ ಹೊಣೆ ವಹಿಸಿಕೊಂಡರು.

ಮಣಿಪಾಲಲ್ಲಿ ಬಿ-ಟೆಕ್‌:

ದೀಪಕ್‌ ರಾಜಕೀಯಕ್ಕೆ ಬರುವ ಮುನ್ನ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರು. ಇವರು 2011ರಲ್ಲಿ ಕರ್ನಾಟಕದ ಉಡುಪಿ ಜಿಲ್ಲೆ ಮಣಿಪಾಲದ ಎಂಐಟಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ ಟೆಕ್ ಮುಗಿಸಿದ್ದರು. ಹಾಗೂ ನಂತರ, ಪ್ರಕಾಶ್ 4 ವರ್ಷಗಳ ಕಾಲ ಐಟಿ ವಲಯದಲ್ಲಿ ಕೆಲಸ ಮಾಡಿ, ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.