ಸಾರಾಂಶ
ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಲಾಗುತ್ತಿದೆ. ಈ ದಾಳಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.
ಇಂಫಾಲ್: ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಸಂಘರ್ಷ ತಹಬದಿಗೆ ಸರ್ಕಾರಗಳು ಹರಸಾಹಸ ಪಡುತ್ತಿರುವಾಗಲೇ, ದುಷ್ಕರ್ಮಿಗಳು ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸುವ ದುಷ್ಕೃತ್ಯಕ್ಕೆ ಇಳಿಯುವ ಮೂಲಕ ಭದ್ರತಾ ಪಡೆಗಳಿಗೆ ಸವಾಲು ಹಾಕಿವೆ.
ಕಳೆದ 2 ದಿನದಲ್ಲಿ ರಾಜ್ಯದ ಇಂಫಾಲ್ ಜಿಲ್ಲೆಯ ಕೌಟ್ರುಕ್ ಮತ್ತು ಲೈಕೈ ಪ್ರದೇಶಗಳಲ್ಲಿ ಕುಕಿ ಸಮುದಾಯದವರು ನಡೆಸಿದ ಎರಡು ಪ್ರತ್ಯೇಕ ಡ್ರೋನ್ ಬಾಂಬ್ ದಾಳಿಗಳಲ್ಲಿ ಮೈತೇಯಿ ಸಮುದಾಯದ ಓರ್ವ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಅನೇಕರು ಗಂಭಿರವಾಗಿ ಗಾಯಗೊಂಡಿದ್ದರು.
ಈ ಘಟನೆ ಬೆನ್ನಲ್ಲೇ ಮಾತನಾಡಿದ ಮುಖ್ಯಮಂತ್ರಿ ಬಿರೇನ್ ಸಿಂಗ್ ಇದನ್ನು ಭಯೋತ್ಪಾದಕ ಕೃತ್ಯ ಎಂದು ಕರೆದಿದ್ದು, ಸ್ಥಳಿಯರ ವಿರುದ್ಧದ ಇಂತಹ ದಾಳಿಗೆ ಸರ್ಕಾರ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಭರವಸೆ ನೀಡಿದ್ದಾರೆ.