10 ಶಸ್ತ್ರಸಜ್ಜಿತ ಉಗ್ರಗಾಮಿಗಳ ಹತ್ಯೆ : ಮಿಜೋರಂಗೂ ವ್ಯಾಪಿಸಿದ ಮಣಿಪುರ ಘಟನೆಯ ಕಿಚ್ಚು

| Published : Nov 15 2024, 12:38 AM IST / Updated: Nov 15 2024, 04:44 AM IST

manipur violence

ಸಾರಾಂಶ

ಮಣಿಪುರದ ಜಿರಿಬಾಮ್‌ನಲ್ಲಿ ನ.11ರಂದು ಸಿಆರ್‌ಪಿಎಫ್‌ ಪಡೆಗಳು 10 ಶಸ್ತ್ರಸಜ್ಜಿತ ‘ಉಗ್ರಗಾಮಿಗಳನ್ನು’ ಹತ್ಯೆ ಮಾಡಿದ ಘಟನೆಯ ಬಿಸಿ ಈಗ ಪಕ್ಕದ ಮಿಜೋರಂಗೂ ವ್ಯಾಪಿಸಿದೆ.

ಇಂಫಾಲ್‌/ಐಜ್ವಾಲ್‌: ಮಣಿಪುರದ ಜಿರಿಬಾಮ್‌ನಲ್ಲಿ ನ.11ರಂದು ಸಿಆರ್‌ಪಿಎಫ್‌ ಪಡೆಗಳು 10 ಶಸ್ತ್ರಸಜ್ಜಿತ ‘ಉಗ್ರಗಾಮಿಗಳನ್ನು’ ಹತ್ಯೆ ಮಾಡಿದ ಘಟನೆಯ ಬಿಸಿ ಈಗ ಪಕ್ಕದ ಮಿಜೋರಂಗೂ ವ್ಯಾಪಿಸಿದೆ.

ಹತ ಉಗ್ರರು ಮಿಜೋರಂ ಆದಿವಾಸಿಗಳಾಗಿದ್ದು, ಮಣಿಪುರದಲ್ಲಿ ಅತ್ತ ಕುಕಿ ಸಮುದಾಯಕ್ಕೂ ಸೇರದ ಹಾಗೂ ಮೈತೇಯಿ ಸಮುದಾಯಕ್ಕೂ ಸೇರದ ತಮ್ಮದೇ ಆದ ‘ಹ್ಮಾರ್’ ಹೆಸರಿನ ತಟಸ್ಥ ಪಡೆ ಸ್ಥಾಪಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರು. ಅವರ ಹತ್ಯೆ ಈಗ ಮಿಜೋರಂನಲ್ಲಿ ಆಕ್ರೋಶದ ಅಲೆ ಎಬ್ಬಿಸಿದೆ.

‘ಇದು ಅಮಾಯಕರ ಹತ್ಯೆ. ನಕಲಿ ಕಾರ್ಯಾಚರಣೆ ನಡೆಸಿ ನಮ್ಮವರನ್ನು ಸಾಯಿಸಲಾಗಿದೆ. ಮೃತರೆಲ್ಲ ಹುತಾತ್ಮ ವೀರರು. ನಾವು ಬದುಕುಳಿದರೆ, ನಾವು ಒಟ್ಟಿಗೆ ಬದುಕುತ್ತೇವೆ ಮತ್ತು ನಾವು ಸತ್ತರೆ ಯಾರೂ ಏಕಾಂಗಿಯಾಗಿ ಸಾಯುವುದಿಲ್ಲ. ಅವರನ್ನು ಕೊಂದ ಸಿಆರ್‌ಪಿಎಫ್‌ ಕ್ರಮ ಹಾಗೂ ಅದರ ತಾರತಮ್ಯ ನಡವಳಿಕೆ ಖಂಡಿಸುತ್ತೇವೆ’ ಎಂದು ಒಂದು ಕಾಲದಲ್ಲಿ ಬಿಜೆಪಿ ಮಿತ್ರನಾಗಿದ್ದ ಮಿಜೋ ನ್ಯಾಷನಲ್‌ ಫ್ರಂಟ್‌ (ಎಂಎನ್ಎಫ್‌) ಆಗ್ರಹಿಸಿದೆ.

ಇದೇ ವೇಳೆ ಕಾಂಗ್ರೆಸ್‌ ಪಕ್ಷದ ಮಣಿಪುರ ಘಟಕ ಕೂಡ ಹ್ಮಾರ್ ಬಂಡುಕೋರರ ಪರ ಬ್ಯಾಟ್‌ ಬೀಸಿದ್ದು, ನ್ಯಾಯಕ್ಕೆ ಆಗ್ರಹಿಸಿ ಮಣಿಪುರ ಮುಖ್ಯಮಂತ್ರಿ ಬೀರೇನ್‌ ಸಿಂಗ್‌ಗೆ ಪತ್ರ ಬರೆದಿದೆ.

ಮೈತೇಯಿಗಳಿಗೆ ಮಿಜೋಗಳ ಎಚ್ಚರಿಕೆ:

ಇನ್ನೊಂದೆಡೆ, ‘ಮಿಜೋರಂನಲ್ಲೂ ಅಸ್ಸಾಂನ ಮೈತೇಯಿ ಸಮುದಾಯದ ಜನರಿದ್ದು, ಅವರು ನೆಮ್ಮದಿಯಿಂದ ಇರಬೇಕು ಎಂದರೆ ಮಣಿಪುರದಲ್ಲಿ ಹ್ಮಾರ್‌ ಜನಾಂಗದವರ ಮೇಲೆ ದೌರ್ಜನ್ಯ ನಿಲ್ಲಿಸಬೇಕು’ ಎಂದು ಮಿಜೋ ಸಂಘಟನೆಗಳು ಆಗ್ರಹಿಸಿವೆ.

ಮಣಿಪುರದ ಇನ್ನಷ್ಟು ಪ್ರದೇಶದಲ್ಲಿ ಆಫ್ಪ್ಸಾ ಜಾರಿ

ನವದೆಹಲಿ: ಇತ್ತೀಚೆಗೆ ಹಿಂಸಾಚಾರಕ್ಕೆ ತುತ್ತಾದ ಜಿರಿಬಾಮ್‌ ಸೇರಿದಂತೆ 6 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿವಾದಿತ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಆಫ್ಪ್ಸಾ) ಅನ್ನು ಕೇಂದ್ರ ಸರ್ಕಾರ ಮರುಜಾರಿಗೊಳಿಸಿದೆ. ಪ್ರದೇಶಗಳಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಿಂದ ನಿರಂತರ ಅಸ್ಥಿರ ಪರಿಸ್ಥಿತಿ ಉಂಟಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. 

ಸೆಕ್ಮಾಯಿ, ಲಮ್ಸಾಂಗ್, ಲಾಮ್ಲೈ, ಜಿರಿಬಾಮ್, ಲೀಮಾಖೋಂಗ್ ಮತ್ತು ಮೊಯಿರಾಂಗ್‌ಯಲ್ಲಿ ಆಫ್‌ಸ್ಪಾ ಜಾರಿಗೊಳಿಸಲಾಗಿದೆ. ಕಳೆದ ಅ.1ರಂದು ರಾಜ್ಯದ 19 ಪೊಲೀಸ್ ಠಾಣೆ ವ್ಯಾಪ್ತಿ ಹೊರತುಪಡಿಸಿ ಉಳಿದ ಕಡೆ ಅಫ್ಪ್ಸಾ ಜಾರಿಗೊಳಿಸಲಾಗಿತ್ತು. ಈ ಕಾಯ್ದೆ ಅನ್ವಯ ಸೇನಾ ಪಡೆಗಳು ಯಾವುದೇ ಕಾರಣ ನೀಡದೇ ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸುವ, ಬಂಧಿಸುವ, ಆತ್ಮರಕ್ಷಣೆ ಅಥವಾ ಹಿಂಸಾಚಾರ ತಡೆಗೆ ಗುಂಡಿನ ದಾಳಿ ನಡೆಸಬಹುದಾಗಿರುತ್ತದೆ.