ಸಾರಾಂಶ
ನವದೆಹಲಿ: ಸಮಾಜದ ವಿವಿಧ ವಿಷಯಗಳ ಬಗ್ಗೆ ಜನರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಮತ್ತು ಜನರಿಂದ ಅಭಿಪ್ರಾಯ ಸಂಗ್ರಹಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ್ದ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ಗೆ ಇದೀಗ ದಶಕದ ಸಂಭ್ರಮ.
2014ರಲ್ಲಿ ಪ್ರಧಾನಿ ಮೋದಿ ಕೇಂದ್ರದಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ವೇಳೆ ವಿಜಯದಶಮಿ ಅಂಗವಾಗಿ ಅ.3ರಂದು ಮೊದಲ ಮನ್ ಕೀ ಬಾತ್‌ನಲ್ಲಿ ಮಾತನಾಡಿದ್ದರು. ಇನ್ನೊಂದು ವಾರದಲ್ಲಿ (ಅ.3) ಮೊದಲ ಕಾರ್ಯಕ್ರಮಕ್ಕೆ 10 ವರ್ಷ ತುಂಬಲಿದೆ. ಇದುವರೆಗೂ ಒಟ್ಟು 114 ಕಾರ್ಯಕ್ರಮಗಳು ಪ್ರಸಾರವಾಗಿವೆ.
ಈ ಹಿನ್ನೆಲೆಯಲ್ಲಿ ಭಾನುವಾರ ಪ್ರಸಾರವಾದ ಸೆಪ್ಟೆಂಬರ್ ಮಾಸಿಕದ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ‘ನಕಾರಾತ್ಮಕ ಸಂಭಾಷಣೆಗಳು ಮಾತ್ರ ಜನರ ಗಮನ ಸೆಳೆಯುತ್ತದೆ ಎನ್ನುವ ಮಾತನ್ನು ಮನ್ ಕೀ ಬಾತ್ ಸುಳ್ಳು ಮಾಡಿದೆ. ಈ ಸಂಚಿಕೆ ನನ್ನನ್ನು ಭಾವುಕವಾಗಿಸಿದೆ. ಹಳೆಯ ನೆನಪುಗಳ ಮಹಾಪೂರವೇ ಹರಿದು ಬರುತ್ತಿದೆ. ಮನ್ ಕೀ ಬಾತ್ 10 ವರ್ಷಗಳನ್ನು ಪೂರೈಸಿದೆ’ ಎಂದಿದ್ದಾರೆ.
‘ದಶಕದ ಹಿಂದೆ ಅಕ್ಟೋಬರ್ 3 ವಿಜಯದಶಮಿಯಂದು ಮನ್ ಕೀ ಬಾತ್ ಆರಂಭವಾಗಿತ್ತು. ಈ ಪಯಣವನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ಮಸಾಲೆ ಮಾತುಗಳು ನಕಾರಾತ್ಮಕ ಸಂಭಾಷಣೆಗಳು ಮಾತ್ರ ಜನರ ಗಮನ ಸೆಳೆಯುತ್ತದೆ ಎನ್ನುವ ಮಾತನ್ನು ಸುಳ್ಳಾಗಿಸಿ, ಜನರು ಸಕರಾತ್ಮಕ ಸಂದೇಶ, ಸ್ಫೂರ್ತಿದಾಯಕ ಮಾತುಗಳಿಗೆ ಎಷ್ಟು ಹಾತೊರೆಯುತ್ತಾರೆ ಎನ್ನುವುದು ಮನ್ ಕೀ ಬಾತ್ ಮೂಲಕ ಸಾಬೀತಾಗಿದೆ ಈ ಕಾರ್ಯಕ್ರಮ ದೇಶದ ಒಗ್ಗಟ್ಟಿನ ಬಲದ ಮತ್ತು ಭಾರತದ ಸ್ಪೂರ್ತಿಯ ಪ್ರತೀಕವಾಗಿ ಹೊರಹೊಮ್ಮಿದೆ.. ಈ ಕಾರ್ಯಕ್ರಮವನ್ನು 12 ವಿದೇಶಿ ಮತ್ತು 22 ಭಾರತೀಯ ಭಾಷೆಗಳಲ್ಲಿ ಆಲಿಸಬಹುದು’ ಎಂದರು.