ಸಾರಾಂಶ
ಪಿಟಿಐ ನವದೆಹಲಿಭಾರತದ ಉತ್ಪಾದನಾ ವಲಯದ ಬೆಳವಣಿಗೆಯು ಆರ್ಥಿಕತೆಗೆ ಸಹಜವಾಗಿಯೇ ಟಾನಿಕ್ ನೀಡಿದೆ. ಇದರಿಂದಾಗಿ ಭಾರತದ ಆರ್ಥಿಕತೆ ಅಂದಾಜು ಶೇ.6.6ಕ್ಕಿಂತ ಅಧಿಕವಾಗಿ, ಅಂದರೆ ಶೇ.8.4ರ ದರದಲ್ಲಿ ಬೆಳವಣಿಗೆ ಕಂಡಿದೆ.
ಇದೇ ವೇಳೆ, 2023-24ರ ಸಾಲಿನಲ್ಲಿ ಈ ಮುಂಚಿನ ಅಂದಾಜು ಶೇ.7ರ ಬದಲು ಶೇ.7.6ರ ದರದಲ್ಲಿ ಭಾರತ ಅರ್ಥಿಕ ಪ್ರಗತಿ ಕಾಣಬಹುದು ಎಂದು ಅಂದಾಜಿಸಲಾಗಿದೆ.ಜಿಡಿಪಿ ಬೆಳವಣಿಗೆ ದರ 2022ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕೇವಲ ಶೇ.4.3ರಷ್ಟು ಪ್ರಗತಿ ಕಂಡಿತ್ತು.
ಈಗ ಅದಕ್ಕೆ ಹೋಲಿಸಿದರೆ ಒಂದೇ ವರ್ಷದಲ್ಲಿ ಬೆಳವಣಿಗೆ ದರ ದುಪ್ಪಟ್ಟಾಗಿದೆ. ಇದನ್ನು ದೇಶದ ಆರ್ಥಿಕ ಪ್ರಗತಿಯ ಸಂಕೇತ ಎಂದೇ ವಿಶ್ಲೇಷಿಸಲಾಗಿದೆ.
ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ‘ನರೇಂದ್ರ ಮೋದಿ 2023-24ರ 3ನೇ ತ್ರೈಮಾಸಿಕದಲ್ಲಿ ದೃಢವಾದ ಶೇ.8.4% ಜಿಡಿಪಿ ಬೆಳವಣಿಗೆಯು ಭಾರತೀಯ ಆರ್ಥಿಕತೆಯ ಶಕ್ತಿ ಮತ್ತು ಅದರ ಸಾಮರ್ಥ್ಯವನ್ನು ತೋರಿಸುತ್ತದೆ.
140 ಕೋಟಿ ಭಾರತೀಯರು ಉತ್ತಮ ಜೀವನ ನಡೆಸಲು ಮತ್ತು ವಿಕಸಿತ ಭಾರತವನ್ನು ರೂಪಿಸಲು ಸಹಾಯ ಮಾಡುವ ವೇಗದ ಆರ್ಥಿಕ ಬೆಳವಣಿಗೆಯನ್ನು ತರಲು ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ’ ಎಂದಿದ್ದಾರೆ.
ಬೆಳವಣಿಗೆಗೆ ಕಾರಣ ಏನು?:2022ರ 3ನೇ ತ್ರೈಮಾಸಿಕದಲ್ಲಿ ಉತ್ಪಾದಕ ವಲಯ ಶೇ.4.8ರ ಪ್ರಗತಿ ಕಂಡಿತ್ತು. ಆದರೆ ಈ ತ್ರೈಮಾಸಿಕದಲ್ಲಿ ಶೇ.11.6ರ ಪ್ರಗತಿ ಕಂಡಿದೆ. ಇದೇ ಜಿಡಿಪಿ ಬೆಳವಣಿಗೆ ದರ ಶೇ.8.4ಕ್ಕೆ ಜಿಗಿಯಲು ಕಾರಣವಾಗಿದೆ.