ಭಾರತೀಯ ಮೂಲದ ಓಲಾ ಕಂಪನಿ ‘ಓಲಾ ಮ್ಯಾಪ್‌’ ಬಿಡುಗಡೆ ಮಾಡಿದ ಬೆನ್ನಲ್ಲೇ ಅಮೆರಿಕದ ಮೂಲದ ಗೂಗಲ್‌ ಭಾರತೀಯರಿಗೆ ತನ್ನ ಗೂಗಲ್‌ ಮ್ಯಾಪ್‌ನಲ್ಲಿ ಒಂದಿಷ್ಟು ಹೊಸ ಆಯ್ಕೆಗಳನ್ನು ಪರಿಚಯಿಸಿದೆ.

ನವದೆಹಲಿ: ಭಾರತೀಯ ಮೂಲದ ಓಲಾ ಕಂಪನಿ ‘ಓಲಾ ಮ್ಯಾಪ್‌’ ಬಿಡುಗಡೆ ಮಾಡಿದ ಬೆನ್ನಲ್ಲೇ ಅಮೆರಿಕದ ಮೂಲದ ಗೂಗಲ್‌ ಭಾರತೀಯರಿಗೆ ತನ್ನ ಗೂಗಲ್‌ ಮ್ಯಾಪ್‌ನಲ್ಲಿ ಒಂದಿಷ್ಟು ಹೊಸ ಆಯ್ಕೆಗಳನ್ನು ಪರಿಚಯಿಸಿದೆ. ಅದರನ್ವಯ ಹೊಸ ಗೂಗಲ್‌ ಮ್ಯಾಪ್‌ನಲ್ಲಿ, ಎಲೆಕ್ಟ್ರಿಕ್‌ ಚಾರ್ಜಿಂಗ್‌ ಪಾಯಿಂಟ್‌ ಎಲ್ಲಿದೆ, ಫ್ಲೈಓವರ್‌ ಯಾವುದೋ ಕಾರಣಕ್ಕೆ ಮುಚ್ಚಿದ್ದರೆ ಅದರ ಮಾಹಿತಿ, ಮೆಟ್ರೋ ಟಿಕೆಟ್‌ ಖರೀದಿ, ನಾಲ್ಕು ಚಕ್ರಗಳ ವಾಹನಗಳಿಗೆ ಕಿರಿದಾದ ದಾರಿ ತಪ್ಪಿಸಲು ನೆರವಾಗುವ ಕೃತಕ ಬುದ್ಧಿಮತ್ತೆ ಆಧರಿತ ಆಯ್ಕೆಗಳನ್ನು ಪರಿಚಯಿಸಿದೆ.

ಅಲ್ಲದೆ ಡೆವಲಪರ್‌ಗಳಿಗೆ ಗೂಗಲ್‌ ಮ್ಯಾಪ್‌ ಫ್ಲ್ಯಾಟ್‌ಫಾರಂ ಬಳಕೆ ಶುಲ್ಕವನ್ನು ಶೇ.70ರಷ್ಟು ಕಡಿತ ಕೂಡಾ ಮಾಡಿದೆ.

ಮೊದಲ ಹಂತದಲ್ಲಿ ಈ ಸೇವೆಗಳು ಬೆಂಗಳೂರು ಸೇರಿದಂತೆ 8 ನಗರಗಳ ಬಳಕೆದಾರರಿಗೆ ಲಭ್ಯವಾಗಲಿದೆ. ಆದರೆ ಮೆಟ್ರೋ ಟಿಕೆಟ್‌ ಖರೀದಿ ಸದ್ಯಕ್ಕೆ ಕೊಚ್ಚಿ ಮತ್ತು ಚೆನ್ನೈಗೆ ಮಾತ್ರ ಸೀಮಿತವಾಗಿರಲಿದೆ.

ಇತ್ತೀಚೆಗಷ್ಟೇ ಓಲಾ ಕಂಪನಿಯ ಸಿಇಒ ಭವಿಶ್‌ ಅಗರ್‌ವಾಲ್‌, ಭಾರತೀಯರಿಗೆ ಗೂಗಲ್ ಮ್ಯಾಪ್‌ ತೊರೆದು ಓಲಾ ಮ್ಯಾಪ್ ಬಳಸುವಂತೆ ಕರೆ ನೀಡಿದ್ದರು ಹಾಗೂ ಓಲಾ ಕ್ಯಾಬ್‌/ಆಟೋಗೆ ಓಲಾ ಮ್ಯಾಪ್‌ ಅನ್ನೇ ಬಳಸಲಾಗುವುದು ಎಂದಿದ್ದರು. ಅಲ್ಲದೆ ಬಳಕೆದಾರರಿಗೆ ಇದನ್ನು ಒಂದು ವರ್ಷಗಳ ಕಾಲ ಉಚಿತವಾಗಿ ನೀಡುವ ಘೋಷಣೆಯನ್ನೂ ಮಾಡಿದ್ದರು.