ಸಾರಾಂಶ
ಪುರುಷ ಕಲ್ಯಾಣ ಸಚಿವಾಲಯ ಸ್ಥಾಪಿಸುವ ಭರವಸೆ ನೀಡಿ ಸ್ಪರ್ಧೆ ಮಾಡುತ್ತಿದೆ.
ನವದೆಹಲಿ: ಚುನಾವಣೆಗಳಲ್ಲಿ ರಾಜ್ಯ, ದೇಶದ ಅಭಿವೃದ್ಧಿಗಳ ಜೊತೆಗೆ ಸ್ತ್ರೀ ಸಬಲೀಕರಣ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ಮತ ಕೇಳುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲೊಂದು ರಾಜಕೀಯ ಪಕ್ಷ, ಪುರುಷ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಅದು ಕೂಡ ವರದಕ್ಷಿಣೆ ಸೇರಿದಂತೆ ಬೇರೆ ಬೇರೆ ಕೌಟುಂಬಿಕ ದೌರ್ಜನ್ಯ ಸಂತ್ರಸ್ತ ಪುರುಷರಿಗಾಗಿ.
ಉತ್ತರ ಪ್ರದೇಶದ ಮೇರಾ ಅಧಿಕಾರ್ ರಾಷ್ಟ್ರೀಯ ದಳ (ಎಂಎಆರ್‌ಡಿ) ಎನ್ನುವ ಪ್ರಾದೇಶಿಕ ಪಕ್ಷ ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಮಹಿಳಾ ರಕ್ಷಣೆಗಾಗಿರುವ ಕೌಟುಂಬಿಕ ಹಿಂಸಾಚಾರದಂತಹ ಕಾಯ್ದೆಗಳ ಕಾನೂನಿನಡಿಯಲ್ಲಿ ಸಿಲುಕಿ ಹಾಕಿಕೊಂಡ ಪುರುಷರಿಗಾಗಿ ಹೋರಾಡುತ್ತಿದೆ. 2009ರಲ್ಲಿ ಆರಂಭವಾದ ಈ ಪಕ್ಷ , ಇಲ್ಲಿಯವರೆಗೆ 9 ಚುನಾವಣೆಗಳನ್ನು ಎದುರಿಸಿದೆ. ಈ ಹಿಂದೆ ಸ್ಪರ್ಧಿಸಿದ ಚುನಾವಣೆಗಳಲ್ಲಿ ಠೇವಣಿ ಉಳಿಸಿಕೊಳ್ಳಲು ವಿಫಲರಾದರೂ, ವಿಚಲಿತರಾಗದೆ 2024 ರ ಲೋಕಸಭೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೂ ಪುರುಷ ಹಕ್ಕುಗಳನ್ನೇ ಉಲ್ಲೇಖಿಸಿರುವ ಎಂಎಆರ್‌ಡಿ, ಪುರುಷ ಕಲ್ಯಾಣ ಸಚಿವಾಲಯ, ಪುರುಷ ಸುರಕ್ಷತಾ ಮಸೂದೆ, ಪುರುಷರಿಗಾಗಿ ರಾಷ್ಟ್ರೀಯ ಆಯೋಗ ಸ್ಥಾಪನೆಯಂತಹ ಆಶ್ವಾಸನೆ ನೀಡಿದೆ. ಮಾತ್ರವಲ್ಲದೇ ತಮ್ಮ ಬ್ಯಾನರ್‌ಗಳಲ್ಲಿ ಮರ್ದ್ ಕೋ ದರ್ದ್ ಹೋತಾ ಹೈ( ಪುರುಷರು ನೋವನ್ನು ಅನುಭವಿಸುತ್ತಾರೆ) ಎಂದು ಪ್ರಚಾರ ಮಾಡುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಪಕ್ಷದ ಸ್ಥಾಪಕರಾದ ಕಪಿಲ್ ಅವರು 1999 ರಿಂದ ಇತ್ಯರ್ಥವಾಗದ ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.