ಸಾರಾಂಶ
ನವದೆಹಲಿ : ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ 3ನೇ ದಿನವಾದ ಬುಧವಾರವೂ ಮುಂದುವರೆದಿದೆ. ಸ್ಥಾನಿಕ ವೈದ್ಯರ ಒಕ್ಕೂಟ ತಮ್ಮ ಮುಷ್ಕರ ಹಿಂದಕ್ಕೆ ತೆಗೆದುಕೊಂಡಿದ್ದರೂ, ಇತರ ಸಂಘಟನೆಗಳು ಮುಷ್ಕರ ಕೈಬಿಟ್ಟಿಲ್ಲ.
ಇದರ ಪರಿಣಾಮ ದಿಲ್ಲಿ, ಕೋಲ್ಕತಾ, ಜೈಪುರ, ನೋಯ್ಡಾ, ಲಖನೌ, ಮುಂಬೈ, ರಾಂಚಿ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಹಲವೆಡೆ ವೈದ್ಯಕೀಯ ಸೇವೆಯಲ್ಲಿ ಅಡಚಣೆಯುಂಟಾಗಿದೆ.ಘಟನೆಯ ಕೇಂದ್ರ ಬಿಂದು ಪಶ್ಚಿಮ ಬಂಗಾಳದಲ್ಲಿ ಬುಧವಾರವೂ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿತು. ಹಿರಿಯ ವೈದ್ಯರು ಕೂಡ ಕರ್ತವ್ಯಕ್ಕೆ ಹಾಜರಾಗದೇ ಕಿರಿಯ ವೈದ್ಯರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ವೈದ್ಯರು ಸಿಗದೇ ಹಲವು ಆಸ್ಪತ್ರೆಗಳಲ್ಲಿ ಹೊರ ರೋಗಿ ಚಿಕಿತ್ಸಾ ಘಟಕದಲ್ಲಿ ಬಹು ದೂರದವರೆಗೆ ಸರತಿ ಸಾಲಿನಲ್ಲಿ ರೋಗಿಗಳು ನಿಂತಿರುವುದು ಕಂಡು ಬಂತು.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕೂಡ ವೈದ್ಯರ ಪ್ರತಿಭಟನೆ ಮೂರನೇ ದಿನವೂ ಮುಂದುವರೆಯಿತು.
ಏಮ್ಸ್, ವಿಎಂಎಂಸಿ, ಸಫ್ದರ್‌ಜಂಗ್, ರಾಮ ಮನೋಹರ್ ಲೋಹಿಯಾ,ಇಂದಿರಾ ಗಾಂಧಿ ಆಸ್ಪತ್ರೆಗಳಲ್ಲಿ ವೈದ್ಯರು ಒಪಿಡಿ ಸೇರಿದಂತೆ ಆಸ್ಪತ್ರೆಯ ಕೆಲ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಮುಂದುವರೆಸಿದರು.ದೇಶದ ಹಲವು ರಾಜ್ಯಗಳಲ್ಲಿ ಪ್ರಮುಖ ಆಸ್ಪತ್ರೆಗಳಲ್ಲಿ ಬುಧವಾರವೂ ಇದೇ ಪರಿಸ್ಥಿತಿ ಕಂಡುಬಂತು.
ಉತ್ತರ ಪ್ರದೇಶದ ಲಖನೌ, ನೋಯ್ಡಾ, ವಾರಾಣಾಸಿ, ಆಗ್ರಾ, ಗೋರಖ್‌ಪುರ, ಝಾನ್ಸಿ ಸೇರಿದಂತೆ ಹಲವೆಡೆ ಮುಷ್ಕರ ನಡೆಯಿತು. ರಾಜಸ್ಥಾನ, ಜಾರ್ಖಂಡ್‌ನಲ್ಲಿಯೂ ವೈದ್ಯರು ಘಟನೆ ಖಂಡಿಸಿ ಬೀದಿಗಿಳಿದು ಪ್ರತಿಭಟಿಸಿದರು.