ಸಾರಾಂಶ
‘ನಾನು, ಡೊನಾಲ್ಡ್ ಟ್ರಂಪ್, ಮೋದಿಯಂಥ ಬಲಪಂಥೀಯ ನಾಯಕರು ಒಂದಾದರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಕೂಗೆಬ್ಬಿಸುತ್ತಾರೆ, ಆದರೆ ಅದೇ ಎಡಪಂಥೀಯ ನಾಯಕರು ಇದೇ ರೀತಿ ಮೈತ್ರಿ ಮಾಡಿಕೊಂಡಾಗ ಪ್ರಶಂಸೆ ವ್ಯಕ್ತಪಡಿಸುತ್ತಾರೆ’ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕಿಡಿಕಾರಿದ್ದಾರೆ.
ವಾಷಿಂಗ್ಟನ್ : ‘ನಾನು, ಡೊನಾಲ್ಡ್ ಟ್ರಂಪ್, ಮೋದಿಯಂಥ ಬಲಪಂಥೀಯ ನಾಯಕರು ಒಂದಾದರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಕೂಗೆಬ್ಬಿಸುತ್ತಾರೆ, ಆದರೆ ಅದೇ ಎಡಪಂಥೀಯ ನಾಯಕರು ಇದೇ ರೀತಿ ಮೈತ್ರಿ ಮಾಡಿಕೊಂಡಾಗ ಪ್ರಶಂಸೆ ವ್ಯಕ್ತಪಡಿಸುತ್ತಾರೆ’ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಎಡಪಂಥೀಯರ ವಿರುದ್ಧ ಕಿಡಿಕಾರಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್(ಸಿಪಿಎಸಿ)ನಲ್ಲಿ ವಿಡಿಯೋ ಲಿಂಕ್ ಮೂಲಕ ಮಾತನಾಡಿದ ಅವರು, ‘ಎಡಪಂಥೀಯರು ಟ್ರಂಪ್ ಅವರ ಗೆಲುವಿನಿಂದ ಆತಂಕಕ್ಕೊಳಗಾಗಿದ್ದಾರೆ. ಕನ್ಸರ್ವೇಟಿವ್‌ಗಳು ಗೆಲ್ಲುತ್ತಿರುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಂದಾಗುತ್ತಿರುವುದು ಎಡಪಂಥೀಯರಿಗೆ ವಿಪರೀತ ಹೊಟ್ಟೆಯುರಿ ಉಂಟು ಮಾಡುತ್ತಿದೆ’ ಎಂದರು.
‘ಬಿಲ್ ಕ್ಲಿಂಟನ್ ಮತ್ತು ಹಿಂದಿನ ಬ್ರಿಟನ್ ಪ್ರಧಾನಿ ಟೋನಿಬ್ಲೇರ್ ಅವರು 90ರ ದಶಕದಲ್ಲಿ ಅಂತಾರಾಷ್ಟ್ರೀಯ ಎಡಪಂಥೀಯ ಉದಾರವಾದಿ ನೆಟ್‌ವರ್ಕ್ ರಚಿಸಿದಾಗ ಅವರನ್ನು ‘ಮುತ್ಸದ್ದಿಗಳು’ ಎಂದು ಕರೆಯಲಾಯಿತು. ಆದರೆ ಇದೀಗ ಟ್ರಂಪ್, ಮೆಲೋನಿ, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಅಥವಾ ಪ್ರಧಾನಿ ಮೋದಿ ಅವರು ಪರಸ್ಪರ ಮಾತುಕತೆ ನಡೆಸಿದರೆ ‘ಪ್ರಜಾಪ್ರಭುತ್ವಕ್ಕೆ ಬೆದರಿಕೆ’ ಎನ್ನುತ್ತಿದ್ದಾರೆ. ಈ ಎಡಪಂಥೀಯರ ದ್ವಿಮುಖ ನೀತಿ ನಮಗೆ ಅಭ್ಯಾಸವಾಗಿ ಹೋಗಿದೆ. ಅವರು ನಮ್ಮ ಮೇಲೆ ಎಷ್ಟೇ ಕೆಸರೆರಚಿಸಿದರೂ ಎಡಪಂಥೀಯರ ಸುಳ್ಳುಗಳನ್ನು ಜನ ನಂಬುತ್ತಿಲ್ಲ. ಜನ ನಮಗೇ ಮತಹಾಕುತ್ತಿದ್ದಾರೆ’ ಎಂದು ಮೆಲೋನಿ ಹೇಳಿದರು.
ನಮ್ಮ ದೇಶವನ್ನು ಪ್ರೀತಿಸ್ತೇವೆ:
ನಾವು ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ, ನಮ್ಮ ದೇಶವನ್ನು ಪ್ರೀತಿಸುತ್ತೇವೆ ಮತ್ತು ಗಡಿಗಳನ್ನು ಭದ್ರಗೊಳಿಸುತ್ತೇವೆ, ಉದ್ಯಮ ಹಾಗೂ ಹಸಿರು ಎಡಪಂಥೀಯರ ಹುಚ್ಚುತನದಿಂದ ಜನರನ್ನು ರಕ್ಷಿಸುತ್ತೇವೆ ಹಾಗೂ ನಮ್ಮ ಕೌಟುಂಬಿಕ ಬದುಕನ್ನು ಕಾಪಾಡುತ್ತೇವೆ ಎಂದು ಜನ ನಮಗೆ ಮತಹಾಕುತ್ತಾರೆ. ನಾವು ಎಚ್ಚರವಾದದ ವಿರುದ್ಧ ಹೋರಾಡುತ್ತೇವೆ ಮತ್ತು ಸಾಮಾನ್ಯ ತಿಳಿವಳಿಕೆಯ ಪರವಾಗಿದ್ದೇವೆ ಎಂದು ಇದೇ ವೇಳೆ ಹೇಳಿದರು.
ಉಕ್ರೇನ್ ವಿಚಾರವೂ ಸೇರಿ ಹಲವು ವಿಷಯಗಳಲ್ಲಿ ಮಿತ್ರರ ನಡುವೆ ಭಿನ್ನಮತ ಹೆಚ್ಚಾಗಿದ್ದರೂ ಟ್ರಂಪ್ ಅವರ ಕಾಲದಲ್ಲಿ ಅಮೆರಿಕ ಮತ್ತು ಯುರೋಪ್ ಹತ್ತಿರವಾಗಿಯೇ ಇರಲಿದೆ. ನಮ್ಮ ವಿರೋಧಿಗಳು ಯುರೋಪ್‌ನಿಂದ ಟ್ರಂಪ್ ದೂರಸರಿಯುತ್ತಾರೆ ಎಂದೇ ಭಾವಿಸಿದ್ದಾರೆ. ಆದರೆ ಅಂಥ ಯೋಚನೆಗಳು ಸುಳ್ಳಾಗಲಿವೆ ಎಂಬ ಖಚಿತ ವಿಶ್ವಾಸ ನನಗಿದೆ ಎಂದರು.