ಪುರುಷ ಟೈಲರ್‌ ಸ್ತ್ರೀಯರ ಅಳತೆ ಪಡೆವುದು, ಮಹಿಳೆಯರ ಹೇರ್‌ ಕಟ್‌ ಮಾಡುವುದು ಬ್ಯಾನ್‌?

| Published : Nov 09 2024, 01:19 AM IST / Updated: Nov 09 2024, 04:46 AM IST

ಸಾರಾಂಶ

ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳ ತಡೆಗಟ್ಟುವ ಸಲುವಾಗಿ ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆ ಅಳತೆ ಪಡೆಯುವುದನ್ನು ನಿಷೇಧಿಸುವ ಮತ್ತು ಸಲೂನ್‌ಗಳಲ್ಲಿ ಪುರುಷರು ಮಹಿಳೆಯರ ಹೇರ್‌ ಕಟ್‌ ಮಾಡಬಾರದು ಎಂಬ ನಿಯಮ ಜಾರಿಗೆ ಒತ್ತಾಯಿಸುವ ನಿರ್ಧಾರವೊಂದನ್ನು ಉತ್ತರಪ್ರದೇಶದ ಮಹಿಳಾ ಆಯೋಗ ತೆಗೆದುಕೊಂಡಿದೆ. 

ಲಖನೌ: ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳ ತಡೆಗಟ್ಟುವ ಸಲುವಾಗಿ ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆ ಅಳತೆ ಪಡೆಯುವುದನ್ನು ನಿಷೇಧಿಸುವ ಮತ್ತು ಸಲೂನ್‌ಗಳಲ್ಲಿ ಪುರುಷರು ಮಹಿಳೆಯರ ಹೇರ್‌ ಕಟ್‌ ಮಾಡಬಾರದು ಎಂಬ ನಿಯಮ ಜಾರಿಗೆ ಒತ್ತಾಯಿಸುವ ನಿರ್ಧಾರವೊಂದನ್ನು ಉತ್ತರಪ್ರದೇಶದ ಮಹಿಳಾ ಆಯೋಗ ತೆಗೆದುಕೊಂಡಿದೆ. 

ಅಲ್ಲದೆ ಇಂಥದ್ದೊಂದು ನಿಯಮ ಜಾರಿ ಮಾಡುವಂತೆ ಅದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಮಹಿಳಾ ಆಯೋಗದ ಅಧ್ಯಕ್ಷೆ ಬಬಿತಾ ಚೌಹಾಣ್‌ ನೇತೃತ್ವದಲ್ಲಿ ಅ.28ರಂದು ನಡೆದ ಸಭೆಯಲ್ಲಿ, ಬಟ್ಟೆ ಹೊಲಿಯುವ ಅಂಗಡಿಗಳಲ್ಲಿ ಪುರುಷರು ಮಹಿಳೆಯರ ವಸ್ತ್ರದ ಅಳತೆ ಪಡೆಯಬಾರದು, ಪುರುಷರು ಇರುವ ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರೇ ಮಹಿಳೆಯರ ವಸ್ತ್ರದ ಅಳತೆ ಪಡೆಯಬೇಕು, ಇಂಥ ಅಂಗಡಿಗಳಲ್ಲಿ ಸಿಸಿಟೀವಿ ಅಳವಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆದು ಅದಕ್ಕೆ ಅನುಮೋದನೆಯನ್ನೂ ಪಡೆಯಲಾಗಿದೆ.

ಇದರ ಜೊತೆಗೆ ಸಲೂನ್‌ಗಳಲ್ಲಿ ಪುರುಷರು ಮಹಿಳೆಯರಿಗೆ ಹೇರ್‌ಕಟ್‌ ಮಾಡಲು ಅವಕಾಶ ನೀಡಬಾರದು, ಜಿಮ್‌ ಮತ್ತು ಯೋಗ ಸೆಂಟರ್‌ಗಳಲ್ಲಿ ಮಹಿಳಾ ತರಬೇತುದಾರರೇ ಮಹಿಳೆಯರಿಗೆ ತರಬೇತಿ ನೀಡಬೇಕು, ಇಲ್ಲಿ ಸಿಸಿಟೀವಿ ಅಳವಡಿಸಬೇಕು, ಮಹಿಳೆಯರ ವಸ್ತ್ರ ಮಾರುವ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿ ಇರಬೇಕು, ನೃತ್ಯ ಶಾಲೆಗಳಲ್ಲಿ ಮಹಿಳಾ ನೃತ್ಯ ತರಬೇತುದಾರರು ಇರಬೇಕು, ಶಾಲಾ ಬಸ್‌ಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಎಂದೂ ಗೊತ್ತುವಳಿ ಸ್ವೀಕರಿಸಲಾಗಿದೆ.

 ಬಹಳಷ್ಟು ಪ್ರಕರಣಗಳಲ್ಲಿ ಮಹಿಳೆಯರ ಬಟ್ಟೆ ಅಳತೆ ಪಡೆಯುವ ವೇಳೆ, ಅವರ ಹೇರ್‌ಕಟ್‌ ಮಾಡುವ ವೇಳೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ದೂರು ಹೆಚ್ಚಾಗುತ್ತಿರುವ ಕಾರಣ ನಾವು ಇಂಥ ನಿರ್ಧಾರ ತೆಗೆದುಕೊಂಡಿದ್ದೇವೆ. ಎಲ್ಲಾ ಪುರುಷರೂ ಕೆಟ್ಟವರಲ್ಲದೇ ಇರಬಹುದು, ಆದರೆ ಬಹಳಷ್ಟು ಕಡೆ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಈ ವಿಷಯದಲ್ಲಿ ಕಾನೂನು ಜಾರಿ ಮಾಡುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಆಯೋಗದ ಸದಸ್ಯೆ ಹಿಮಾನಿ ಅಗರ್‌ವಾಲ್‌ ಮಾಹಿತಿ ನೀಡಿದ್ದಾರೆ.