ಆತ್ಮಹತ್ಯೆ ಪ್ರಚೋದನೆಗೆ ಕೇವಲ ‘ಕಿರುಕುಳ’ ನೀಡಿರುವುದು ಸಾಕಾಗದು : ಸುಪ್ರೀಂ ಕೋರ್ಟ್

| Published : Dec 13 2024, 12:45 AM IST / Updated: Dec 13 2024, 09:22 AM IST

Supreme Court

ಸಾರಾಂಶ

  ‘ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಪರಾಧಕ್ಕೆ ಯಾರನ್ನಾದರೂ ತಪ್ಪಿತಸ್ಥ ಎಂದು ಘೋಷಿಸಲು ಕೇವಲ ಕಿರುಕುಳ ನೀಡಿರುವುದು ಸಾಕಾಗುವುದಿಲ್ಲ. ಇದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಚೋದನೆಯ ಸ್ಪಷ್ಟ ಪುರಾವೆಗಳು ಇರಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 ನವದೆಹಲಿ : ಬೆಂಗಳೂರಿನಲ್ಲಿ ನಡೆದ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತೀವ್ರ ಆಕ್ರೋಶದ ನಡುವೆಯೇ, ‘ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಪರಾಧಕ್ಕೆ ಯಾರನ್ನಾದರೂ ತಪ್ಪಿತಸ್ಥ ಎಂದು ಘೋಷಿಸಲು ಕೇವಲ ಕಿರುಕುಳ ನೀಡಿರುವುದು ಸಾಕಾಗುವುದಿಲ್ಲ. ಇದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಚೋದನೆಯ ಸ್ಪಷ್ಟ ಪುರಾವೆಗಳು ಇರಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಹಿಳೆಯೊಬ್ಬರಿಗೆ ಅತ್ತೆ ಮನೆ ಕಡೆಯವರು ಕಿರುಕುಳ ನೀಡಿದಾಗ ಆತ್ಮಹತ್ಯೆಗೆ ಶರಣಾಗಿದ್ದಳು ಎಂಬ ಆರೋಪ ಕೇಳಿಬಂದಿತ್ತು. ಈ ಕೇಸಿನಲ್ಲಿ ಬಂಧಿತರಾಗಿದ್ದ ಮಹಿಳೆಯ ಪತಿ ಮತ್ತು ಆಕೆಯ ಅತ್ತೆಯನ್ನು ಬಿಡುಗಡೆ ಮಾಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿತ್ತು.

 ಈ ಆದೇಶವನ್ನು ಪ್ರಶ್ನಿಸಿ ಬಂಧಿತರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ। ವಿಕ್ರಮ್ ನಾಥ್ ಮತ್ತು ನ್ಯಾ। ಪಿ.ಬಿ. ವರಾಳೆ ಅವರ ಪೀಠ, ಮೇಲ್ಮನವಿಯನ್ನು ಭಾಗಶಃ ಅನುಮತಿಸಿ, 10 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವ ಐಪಿಸಿಯ ಸೆಕ್ಷನ್ 306 ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ) ಮೇಲ್ಮನವಿದಾರರನ್ನು ಬಿಡುಗಡೆ ಮಾಡಿತು. 

ಆದಾಗ್ಯೂ, ಇದು ಸೆಕ್ಷನ್ 498 ಎ ಅಡಿಯಲ್ಲಿ (ವಿವಾಹಿತ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಆರೋಪವನ್ನು ಎತ್ತಿಹಿಡಿದಿದೆ ಮತ್ತು ಈ ನಿಬಂಧನೆಯ ಅಡಿಯಲ್ಲಿ ಅವರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಬೇಕು ಎಂದು ಹೇಳಿದೆ.34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಅವರ ಇತ್ತೀಚಿನ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ, ಈ ತೀರ್ಪಿನ ಅವಲೋಕನಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ತನ್ನ ವಿಚ್ಛೇದಿತ ಪತ್ನಿ ಮತ್ತು ಆಕೆಯ ಕುಟುಂಬದ ಕೈಯಿಂದ ಕಿರುಕುಳ ನಡೆಯಿತು ಎಂದು ಆರೋಪಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. 

ಹೀಗಾಗಿ ಅತುಲ್‌ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ, ತಂದೆ ಅನುರಾಗ್ ಮತ್ತು ಚಿಕ್ಕಪ್ಪ ಸುಶೀಲ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಉನ್ನತ ನ್ಯಾಯಾಲಯದ ಅವಲೋಕನಗಳು ನಿಶಾ ಮತ್ತು ಅವರ ಕುಟುಂಬ ಸದಸ್ಯರ ಸಹಾಯಕ್ಕೆ ಬರಬಹುದು ಎಂದು ವಿಶ್ಲೇಷಿಸಲಾಗಿದೆ.