ದೇಶದ ಹಲವು ಭಾಗಗಳಲ್ಲಿ ರೈಲು ಹಳಿ ತಪ್ಪಿಸುವ ಸಂಚು : ಸ್ವಲ್ಪದರಲ್ಲೇ ತಪ್ಪಿದ ಅನಾಹುತ

| Published : Sep 23 2024, 01:18 AM IST / Updated: Sep 23 2024, 05:09 AM IST

ಸಾರಾಂಶ

ದೇಶದ ಹಲವು ಭಾಗಗಳಲ್ಲಿ ರೈಲು ಹಳಿ ತಪ್ಪಿಸುವ ಸಂಚುಗಳು ಮುಂದುವರೆದಿವೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ನಡೆದ 2 ಪ್ರತ್ಯೇಕ ಘಟನೆಗಳಲ್ಲಿ ಫಾಗ್‌ ಡಿಟೋನೇಟರ್ ಮತ್ತು ಗ್ಯಾಸ್‌ ಸಿಲಿಂಡರ್ ಪತ್ತೆ

ಕಾನ್ಪುರ/ ಬುರ್ಹಾನ್ಪುರ: ದೇಶದ ಹಲವು ಭಾಗಗಳಲ್ಲಿ ರೈಲು ಹಳಿ ತಪ್ಪಿಸುವ ಸಂಚುಗಳು ಮುಂದುವರೆದಿವೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ನಡೆದ 2 ಪ್ರತ್ಯೇಕ ಘಟನೆಗಳಲ್ಲಿ ಫಾಗ್‌ ಡಿಟೋನೇಟರ್ ಮತ್ತು ಗ್ಯಾಸ್‌ ಸಿಲಿಂಡರ್ ಪತ್ತೆಯಾಗಿದ್ದು, ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಒಂದು ಘಟನೆ ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ನಡೆದಿದ್ದರೆ, ಇನ್ನೊಂದು ಘಟನೆ ಉತ್ತರ ಪ್ರದೇಶದ ಕಾನ್ಪುರ ಸನಿಹ ನಡೆದಿದೆ.

ಕಾನ್ಪುರ ಸನಿಹ ಸಿಲಿಂಡರ್‌ ಪತ್ತೆ:

ಅತ್ತ ಉತ್ತರಪ್ರದೇಶದ ಪ್ರೇಂಪುರ ರೈಲು ನಿಲ್ದಾಣದ ಬಳಿ ಹಳಿಯ ಮೇಲೆ ಖಾಲಿ ಗ್ಯಾಸ್‌ ಸಿಲಿಂಡರ್‌ ಪತ್ತೆಯಾಗಿದ್ದು, ಇದು ಈ ತಿಂಗಳಲ್ಲಿ ನಡೆದ 2ನೇ ಘಟನೆಯಾಗಿದೆ. ಕಾನ್ಪುರದಿಂದ ಪ್ರಯಾಗರಾಜಕ್ಕೆ ತೆರಳುತ್ತಿದ್ದ ಗೂಡ್ಸ್‌ ರೈಲಿಗೆ ಅಡ್ಡಲಾಗಿ 5 ಕೆ.ಜಿ. ಖಾಲಿ ಸಿಲಿಂಡರ್‌ ಇರಿಸಲಾಗಿತ್ತು. ಇದನ್ನು ದೂರದಿಂದಲೇ ಲೋಕೋ ಪೈಲೆಟ್‌ ಗಮನಿಸಿ ತುರ್ತು ಬ್ರೇಕ್‌ ಹಾಕಿದ್ದಾರೆ. ಈ ಘಟನೆ ಬೆಳಗ್ಗೆ 8:10ಕ್ಕೆ ನಡೆದಿದ್ದು, ಸಿಲಿಂಡರ್‌ ತೆರವಿನ ಬಳಿಕ ತನಿಖೆ ಮುಂದುವರೆದಿದೆ.

ರೈಲ್ವೆ ಸಿಬ್ಬಂದಿಯೇ ಇಟ್ಟ ಫಾಗ್‌ ಡಿಟೋನೇಟರ್‌ ಸ್ಫೋಟ

ಖಂಡ್ವಾ (ಮ.ಪ್ರ.): ಯೋಧರನ್ನು ಹೊತ್ತ ಸೇನೆಯ ವಿಶೇಷ ರೈಲು ಜಮ್ಮು ಮತ್ತು ಕಾಶ್ಮೀರದಿಂದ ಕರ್ನಾಟಕದ ಕಡೆ ತೆರಳುತ್ತಿದ್ದ ವೇಳೆ ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ಹಳಿಗಳ ಮೇಲೆ10 ಡಿಟೋನೇಟರ್‌ಗಳು ಸ್ಫೋಟಗೊಂಡಿವೆ.ರೈಲು ಇನ್ನೂ ದೂರ ಇರುವಾಗಲೇ ಇವು ಸ್ಫೋಟಿಸಿದ್ದು, ಇವನ್ನು ನೋಡಿ ಚಾಲಕ, ರೈಲು ನಿಲ್ಲಿಸಿದ. ಹೀಗಾಗಿ ಅನಾಹುತ ತಪ್ಪಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ, ‘ಇವು ರೈಲ್ವೆ ಸಿಬ್ಬಂದಿ ಬಳಸುವ ಫಾಗ್‌ ಡಿಟೋನೇಟರ್‌ಗಳು. ವಿಧ್ವಂಸಕ ಸಾಧನಗಳಲ್ಲ. ದಟ್ಟ ಮಂಜು ಇರುವಾಗ ಸಿಗ್ನಲ್‌ಗಳು ಚಾಲಕರಿಗೆ ಕಾಣುವುದಿಲ್ಲ. ಆಗ ಫಾಗ್‌ ಡಿಟೋನೇಟರ್‌ಗಳನ್ನು ರೈಲ್ವೆ ಸಿಬ್ಬಂದಿಯು ಸ್ಫೋಟಿಸಿ, ಸಿಗ್ನಲ್‌ ಸಮೀಪಿಸುತ್ತಿದೆ ಎಂದು ಚಾಲಕರಿಗೆ ಸೂಚನೆ ನೀಡುತ್ತಾರೆ. ಆದರೆ ಈಗ ಮಂಜು ಇಲ್ಲದ ವೇಳೆ ಇವನ್ನು ಯಾರು ಇರಿಸಿದರು ಗೊತ್ತಾಗಿಲ್ಲ, ಮೇಲಾಗಿ ಇವು ಎಕ್ಸ್‌ಪೈರಿ ಆದ ಡಿಟೋನೇಟರ್‌ಗಳು. ಈ ಬಗ್ಗೆ ತನಿಖೆ ನಡೆದಿದೆ’ ಎಂದಿದ್ದಾರೆ.