ಹೊಸ ಜಿಎಸ್ಟಿ ನೀತಿಯಿಂದ ಮೊಬೈಲ್‌, ಕಾರು, ಕಂಪ್ಯೂಟರ್‌ ಅಗ್ಗ?

| N/A | Published : Aug 19 2025, 01:01 AM IST / Updated: Aug 19 2025, 04:07 AM IST

ಹೊಸ ಜಿಎಸ್ಟಿ ನೀತಿಯಿಂದ ಮೊಬೈಲ್‌, ಕಾರು, ಕಂಪ್ಯೂಟರ್‌ ಅಗ್ಗ?
Share this Article
  • FB
  • TW
  • Linkdin
  • Email

ಸಾರಾಂಶ

ಜಿಎಸ್ಟಿ ತೆರಿಗೆ ಸ್ತರವನ್ನು ಹಾಲಿ ಇರುವ 4 ರಿಂದ 2ಕ್ಕೆ ಇಳಿಸುವ ಕೇಂದ್ರದ ಪ್ರಸ್ತಾಪ ಜಾರಿಗೆ ಬಂದರೆ ಮೊಬೈಲ್, ಕಂಪ್ಯೂಟರ್‌, ಸಣ್ಣ ಕಾರು, ದ್ವಿಚಕ್ರ ವಾಹನ ಸೇರಿದಂತೆ ಹಲವು ವಸ್ತುಗಳ ದರ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

 ನವದೆಹಲಿ : ಜಿಎಸ್ಟಿ ತೆರಿಗೆ ಸ್ತರವನ್ನು ಹಾಲಿ ಇರುವ 4 ರಿಂದ 2ಕ್ಕೆ ಇಳಿಸುವ ಕೇಂದ್ರದ ಪ್ರಸ್ತಾಪ ಜಾರಿಗೆ ಬಂದರೆ ಮೊಬೈಲ್, ಕಂಪ್ಯೂಟರ್‌, ಸಣ್ಣ ಕಾರು, ದ್ವಿಚಕ್ರ ವಾಹನ ಸೇರಿದಂತೆ ಹಲವು ವಸ್ತುಗಳ ದರ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಸಕ್ತ ಶೇ,5, 12, 18 ಮತ್ತು ಶೇ.24 ಹೀಗೆ 4 ಸ್ತರದಲ್ಲಿ ವಿವಿಧ ಉತ್ಪನ್ನಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಇವುಗಳನ್ನು ಶೇ.5 ಮತ್ತು ಶೇ.18ಕ್ಕೆ ಮಾತ್ರ ಸೀಮಿತಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ. ಅಂದರೆ ಹಾಲಿ ಶೇ.28ರ ತೆರಿಗೆ ವ್ಯಾಪ್ತಿಗೆ ಬರುವ ವಸ್ತುಗಳ ದರವನ್ನು ಶೇ.18ಕ್ಕೆ ಮತ್ತು ಶೇ.18ರ ಸ್ತರದ ವಸ್ತುಗಳ ತೆರಿಗೆಯನ್ನು ಶೇ.12 ಅಥವಾ ಶೇ.5ಕ್ಕೆ ಇಳಿಸುವ ಸಾಧ್ಯತೆ ಇರುವ ಕಾರಣ ಅವುಗಳ ದರ ಇಳಿಕೆಯಾಗಲಿದೆ.

ಹೀಗಾದಲ್ಲಿ ಮೊಬೈಲ್‌, ಕಂಪ್ಯೂಟರ್‌, ವಾಷಿಂಗ್ ಮಷಿನ್‌ನಂತಹ ಎಲೆಕ್ಟ್ರಾನಿಕ್‌ ವಸ್ತುಗಳು, ಹವಾನಿಯಂತ್ರಣ ಉಪಕರಣಗಳು, ಡೈರಿ ಉತ್ಪನ್ನಗಳು, ಹೊಲಿಗೆ ಯಂತ್ರ , ಕುಕ್ಕರ್‌, ಸೈಕಲ್, ಸಿದ್ಧ ಉಡುಪುಗಳು,ಚಪ್ಪಲಿಗಳು, ಲಸಿಕೆ, ಕೃಷಿ ಉಪಕರಣಗಳಂತಹ ಅಗತ್ಯ ವಸ್ತುಗಳ ಬೆಲೆಯೂ ತಗ್ಗಲಿದೆ ಎನ್ನಲಾಗಿದೆ.

ಉಳಿದಂತೆ ಹಾಲಿ ಶೇ.28ರ ತೆರಿಗೆ ವ್ಯಾಪ್ತಿಯಲ್ಲಿರುವ ತಂಬಾಕು ಮೊದಲಾದ ಉತ್ಪನ್ನಗಳಿಗೆ ಶೇ.40ರಷ್ಟು ಭಾರೀ ತೆರಿಗೆ ವಿಧಿಸಿ ಅವುಗಳನ್ನು ಪ್ರತ್ಯೇಕವಾಗಿ ಇರಿಸುವ, ಅದರ ವ್ಯಾಪ್ತಿಗೆ ಕೇವಲ 6-7 ಉತ್ಪನ್ನ ಸೇರಿಸುವ ಇರಾದೆಯಲ್ಲಿ ಸರ್ಕಾರ ಇದೆ ಎನ್ನಲಾಗಿದೆ.

 ಯಾವ ವಸ್ತುಗಳು ಇಳಿಕೆ?

- ಮೊಬೈಲ್‌, ಕಂಪ್ಯೂಟರ್‌, ವಾಷಿಂಗ್ ಮಷಿನ್‌, ಎಲೆಕ್ಟ್ರಾನಿಕ್‌ ವಸ್ತುಗಳು, ಹವಾನಿಯಂತ್ರಣ ಉಪಕರಣಗಳು ಶೇ.28ರ ಬದಲು ಶೇ.18ಕ್ಕೆ ಇಳಿಕೆ ನಿರೀಕ್ಷೆ

- ಡೈರಿ ಉತ್ಪನ್ನ, ಹೊಲಿಗೆ ಯಂತ್ರ , ಕುಕ್ಕರ್‌, ಸೈಕಲ್, ಸಿದ್ಧ ಉಡುಪುಗಳು, ಚಪ್ಪಲಿಗಳು, ಲಸಿಕೆ, ಕೃಷಿ ಉಪಕರಣಗಳ ಜಿಎಸ್ಟಿ ಶೇ.5ಕ್ಕೆ ಇಳಿಕೆ ಸಾಧ್ಯತೆ

- ಆದರೆ ತಂಬಾಕು, ಮದ್ಯ ಸೇರಿ ಹಲವು ಉತ್ಪನ್ನಗಳ ಮೇಲೆ ಸರ್ಕಾರದ ಪ್ರಹಾರ. ಇವುಗಳ ಮೇಲೆ ಶೇ.28ರ ಜಿಎಸ್ಟಿ ಬದಲು ಶೇ.40 ಜಿಎಸ್ಟಿ ಸಂಭವ

 ಹೊಸ ನೀತಿಯಿಂದ 50000 ಕೋಟಿ ಆದಾಯ ಕೊರತೆ - ಆದರೆ ಬಳಕೆ ಏರಿ ತೆರಿಗೆ ಸಂಗ್ರಹ ಹೆಚ್ಚಳದ ಭರವಸೆ

  ನವದೆಹಲಿ :  ಹಾಲಿ 4 ಸ್ತರದಲ್ಲಿರುವ ಜಿಎಸ್ಟಿ ದರವನ್ನು ಕೇವಲ 2ಕ್ಕೆ ಇಳಿಸುವ ಪ್ರಸ್ತಾಪದಿಂದ ಆದಾಯ ಕುಸಿತದ ಆತಂಕದಲ್ಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಭಯ ನೀಡಿದೆ. ಜಿಎಸ್ಟಿಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಸಮ ಪಾಲುದಾರರು. ಮುಂದಿನ ದಿನಗಳಲ್ಲಿ ಹೊಸ ಜಿಎಸ್ಟಿ ನೀತಿಯಿಂದ ಬಳಕೆ ಹೆಚ್ಚಾಗಿ ಹೆಚ್ಚಿನ ತೆರಿಗೆ ಆದಾಯ ಹರಿದುಬರಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿದೆ.ತೆರಿಗೆ ಸ್ತರ ಬದಲಾವಣೆಯಿಂದ ಆರಂಭಿಕ ಹಂತದಲ್ಲಿ ಒಟ್ಟಾರೆ 50000 ಕೋಟಿ ರು.ನಷ್ಟು ತೆರಿಗೆ ಸಂಗ್ರಹ ಕಡಿತವಾಗಬಹುದಾದರೂ, ಅದನ್ನು ಸುಲಭವಾಗಿ ನಿರ್ವಹಿಸಬಹುದು ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ ಎನ್ನಲಾಗಿದೆ.

ಹಾಲಿ ನಿಯಮಗಳ ಅನ್ವಯ ಒಟ್ಟು ತೆರಿಗೆ ಸಂಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಮಪಾಲು ಹೊಂದಿವೆ. ಜೊತೆಗೆ ಕೇಂದ್ರದ ಹಂಚಿಕೆ ಮಾಡಬಹುದಾದ ಆದಾಯದಲ್ಲಿ ಶೆ.41ರಷ್ಟು ರಾಜ್ಯಗಳಿಗೆ ನೀಡಲಾಗುತ್ತದೆ. ಆದರೆ ಹೊಸ ಸ್ತರದಿಂದ ಒಟ್ಟಾರೆ ಆದಾಯ ಕುಂಠಿತವಾಗಿ ತಮ್ಮ ಮೇಲೂ ಪರಿಣಾಮ ಬೀರಬಹುದು ಎಂಬುದು ರಾಜ್ಯಗಳ ಆತಂಕ.ಪ್ರಸಕ್ತ ಒಟ್ಟು ಜಿಎಸ್ಟಿ ತೆರಿಗೆ ಆದಾಯದಲ್ಲಿ ಶೇ.5ರಷ್ಟು ಸ್ತರದಿಂದ ಶೇ.7, ಶೇ.12ರ ಸ್ತರದ ಉತ್ಪನ್ನಗಳಿಂದ ಶೇ.5, ಶೇ.18ರ ಸ್ತರದಿಂದ ಶೇ.65 ಮತ್ತು ಶೇ.28ರಷ್ಟು ಸ್ತರದಿಂದ ಶೇ.11ರಷ್ಟು ಸಂಗ್ರಹವಾಗುತ್ತಿದೆ. ಆದರೆ ಇದೀಗ ಸರ್ಕಾರ ಶೇ.5 ಮತ್ತು ಶೇ.18ರ ಸ್ತರ ಮಾತ್ರ ಉಳಿಸುವ ಸಾಧ್ಯತೆ ಕಾರಣ ರಾಜ್ಯಗಳಿಗೆ ಆದಾಯದ ಕೊರತೆ ಆತಂಕ ಎದುರಾಗಿದೆ.

Read more Articles on