ವಾರಾಣಸಿಯಲ್ಲಿ ಮೋದಿ ಹ್ಯಾಟ್ರಿಕ್‌ ಜಯ!

| Published : Jun 05 2024, 12:30 AM IST / Updated: Jun 05 2024, 05:16 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸತತ 3ನೇ ಬಾರಿಗೆ ಉತ್ತರ ಪ್ರದೇಶದ ವಾರಾಣಸಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ವಾರಾಣಸಿ :  ಪ್ರಧಾನಿ ನರೇಂದ್ರ ಮೋದಿ ಸತತ 3ನೇ ಬಾರಿಗೆ ಉತ್ತರ ಪ್ರದೇಶದ ವಾರಾಣಸಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಸುಮಾರು 1.52 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ನ ಅಜಯ್‌ ರಾಯ್‌ ವಿರುದ್ಧ ಜಯಭೇರಿ ಬಾರಿಸಿದ ಮೋದಿ, ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ 612970 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಅಜಯ್‌ ರಾಯ್‌ 460457 ಮತ ಪಡೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಆದರೆ ಕಳೆದ ವರ್ಷಕ್ಕಿಂತ ಗೆಲುವಿನ ಅಂತರ ಕಡಿಮೆಯಾಗಿದೆ.

2014ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿದ್ದ ಮೋದಿ, ವಾರಾಣಸಿ ಜೊತೆ ಗುಜರಾತ್‌ನ ವಡೋದರಾ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದರು. ವಡೋದರಾದಲ್ಲಿ 8 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿದರೂ, ಆ ಕ್ಷೇತ್ರವನ್ನು ಬಿಟ್ಟು ಉ.ಪ್ರದೇಶದ ಕ್ಷೇತ್ರವನ್ನು ಉಳಿಸಿಕೊಂಡಿದ್ದ ಮೋದಿಯನ್ನು, 2019ರಲ್ಲಿ ಮತ್ತೊಮ್ಮೆ ವಾರಾಣಸಿ ಮತದಾರರು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದ್ದರು. ಇದೀಗ 2024ರಲ್ಲೂ ಮೋದಿ ನಿರಾಯಾಸವಾಗಿ ಗೆದ್ದು ಬೀಗಿದ್ದು, ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಲು ಸಜ್ಜಾಗಿದ್ದಾರೆ.

ಸುದೀರ್ಘ ಅವಧಿ ಪ್ರಧಾನಿಯಾಗುವತ್ತ ಮೋದಿ

ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದರೊಂದಿಗೆ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದೂ ಖಚಿತವಾಗಿದೆ. ಈ ಸಾಧನೆ ಅವರನ್ನು ದಾಖಲೆಯತ್ತ ಹೆಜ್ಜೆ ಇಡುವಂತೆ ಮಾಡಿದೆ.ಈಗಾಗಲೇ 2 ಬಾರಿ ಪ್ರಧಾನಿಯಾಗಿರುವ ಮೋದಿ ಈ ಅವಧಿಯಲ್ಲಿ 10 ವರ್ಷ 19 ದಿನ ಅಧಿಕಾರದಲ್ಲಿ ಇದ್ದಂತೆ ಆಗಿದೆ. 

ಈ ಮೂಲಕ ಸತತ 10 ವರ್ಷ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ 4ನೆಯವರಾಗಿ ಹೊರಹೊಮ್ಮಿದ್ದಾರೆ. ಒಂದು ವೇಳೆ ಮೂರನೇ ಬಾರಿಯೂ ತಮ್ಮ ಅಧಿಕಾರವನ್ನು ಪೂರೈಸಿದರೆ ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಎನ್ನುವ ದಾಖಲೆಗೆ ಪಾತ್ರವಾಗಲಿದ್ದಾರೆ.ಸತತವಾಗಿ ಅತಿ ದೀರ್ಘಕಾಲ ಪ್ರಧಾನಿಯಾದವರ ಪಟ್ಟಿಯಲ್ಲಿ ಪ್ರಸ್ತುತ ಜವಹರ್‌ಲಾಲ್‌ ನೆಹರೂ, ಇಂದಿರಾ ಗಾಂಧಿ ಮೊದಲ ಎರಡು ಸ್ಥಾನದಲ್ಲಿದ್ದು 3ನೇ ಸ್ಥಾನದಲ್ಲಿ ಮೋದಿ ಇದ್ದಾರೆ. ಅದೇ ರೀತಿ ಸತತವಾಗಿ ಎರಡು ಬಾರಿ ಪ್ರಧಾನಿಯಾಗಿ ಅಧಿಕಾರ ಪೂರೈಸಿದವರ ಪಟ್ಟಿಯಲ್ಲಿ ನೆಹರೂ, ಮನಮೋಹನ್‌ ಸಿಂಗ್‌ ನಂತರದ ಸ್ಥಾನದಲ್ಲಿ ಮೋದಿ ಇದ್ದಾರೆ.

ಪ್ರಧಾನಿ ಅವಧಿ ಪ್ರಮಾಣ

ಜವಹರ್‌ಲಾಲ್‌ ನೆಹರೂ 1947-1964 16 ವರ್ಷ/286 ದಿನ

ಇಂದಿರಾ ಗಾಂಧಿ 1966-77, 1980-84 15 ವರ್ಷ/350 ದಿನ

ನರೇಂದ್ರ ಮೋದಿ 2014- 10 ವರ್ಷ/19 ದಿನ

ಮನಮೋಹನ್‌ ಸಿಂಗ್‌ 2004-2014 10 ವರ್ಷ/4 ದಿನ