ಮೋದಿ ಕೀ ಗ್ಯಾರಂಟಿ ಬಿಜೆಪಿ ಪ್ರಣಾಳಿಕೆ ರಿಲೀಸ್‌

| Published : Apr 15 2024, 01:18 AM IST / Updated: Apr 15 2024, 06:36 AM IST

ಸಾರಾಂಶ

ಏಕ ದೇಶ ಏಕ ಚುನಾವಣೆ, ಏಕರೂಪದ ಸಂಹಿತೆ ಜಾರಿ ಭರವಸೆ ನೀಡಲಾಗಿದ್ದು, ಉಚಿತಗಳಿಲ್ಲದ, ಅಭಿವೃದ್ಧಿ ಪರ ಘೋಷಣೆಗಳಿರುವ ಸಂಕಲ್ಪ ಪತ್ರವಾಗಿರುವ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಜನತೆಯನ್ನುದ್ದೇಶಿಸಿ ಮಾತನಾಡಿದರು.

 ನವದೆಹಲಿ : ಏ.19ರಿಂದ ಆರಂಭವಾಗಲಿರುವ 7 ಹಂತಗಳ ಲೋಕಸಭೆ ಚುನಾವಣೆಗೆ ಕೇವಲ ಐದು ದಿನ ಬಾಕಿ ಉಳಿದಿರುವಾಗ, ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಎಂದು ಕರೆಯಲಾಗಿರುವ ‘ಮೋದಿ ಕೀ ಗ್ಯಾರಂಟಿ’ ಎಂಬ ತಲೆಬರಹ ಹೊಂದಿರುವ 76 ಪುಟಗಳ ಈ ಪ್ರಣಾಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಭಾನುವಾರ ಬಿಡುಗಡೆ ಮಾಡಿದರು.

ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರಕ್ಕೆ ಬಂದರೆ ‘ಒಂದು ದೇಶ, ಒಂದು ಚುನಾವಣೆ’, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಭರವಸೆ ಈ ಪ್ರಣಾಳಿಕೆಯ ಹೆಗ್ಗುರುತು.

ಜತೆಗೆ ಮುಂಬೈ-ಅಹಮದಾಬಾದ್‌ ನಡುವೆ ಮುಕ್ತಾಯ ಹಂತಕ್ಕೆ ಬಂದಿರುವ ದೇಶದ ಮೊದಲ ಬುಲೆಟ್‌ ರೈಲು ಮಾರ್ಗದ ಜತೆಗೆ ಉತ್ತರ, ದಕ್ಷಿಣ, ಪೂರ್ವ ಭಾರತದಲ್ಲೂ ಪ್ರತ್ಯೇಕ ಮೂರು ಬುಲೆಟ್‌ ಮಾರ್ಗ ಅನುಷ್ಠಾನಗೊಳಿಸುವ ಹಾಗೂ ರೈಲುಗಳಲ್ಲಿ ವೇಟಿಂಗ್‌ ಲಿಸ್ಟ್‌ ವ್ಯವಸ್ಥೆಯನ್ನು ರದ್ದುಗೊಳಿಸುವ ಮತ್ತು ಪ್ರತಿ ಮನೆಗೂ ಕೊಳವೆ ಮೂಲಕ ಅನಿಲ ಪೂರೈಸುವ ಭರವಸೆಯನ್ನು ಸಂಕಲ್ಪ ಪತ್ರದಲ್ಲಿ ನೀಡಲಾಗಿದೆ.

70 ವರ್ಷ ಮೇಲ್ಪಟ್ಟವರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ ನೀಡುವುದಾಗಿ ಘೋಷಿಸಲಾಗಿದೆ. ಸದ್ಯ ಆಯುಷ್ಮಾನ್‌ ಭಾರತ್‌ ಯೋಜನೆಯಡಿ 16ರಿಂದ 59 ವರ್ಷದ ಒಳಗಿನವರಿಗೆ ಮಾತ್ರ ಸೌಲಭ್ಯ ಸಿಗುತ್ತಿದೆ.

ದೇಶದ ಜನರಿಗೆ ನೀಡಲಾಗುತ್ತಿರುವ ಉಚಿತ ಪಡಿತರ ಯೋಜನೆ ಐದು ವರ್ಷಗಳ ಕಾಲ ವಿಸ್ತರಣೆ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾಯ್ದೆ, 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್‌ ನಡೆಸುವುದಕ್ಕೆ ಬಿಡ್‌ ಮಾಡುವ ಆಶ್ವಾಸನೆಯನ್ನು ನೀಡಲಾಗಿದೆ. ಸದ್ಯ ವಿಶ್ವದಲ್ಲಿ 5ನೇ ಆರ್ಥಿಕ ಶಕ್ತಿಯಾಗಿರುವ ಭಾರತವನ್ನು 3ನೇ ಸ್ಥಾನಕ್ಕೆ ತರುವ ‘ಗ್ಯಾರಂಟಿ’ ಭರವಸೆ ಕೊಡಲಾಗಿದೆ.ರಾಮಮಂದಿರ ಉದ್ಘಾಟನೆ ನಿಮಿತ್ತ ವಿಶ್ವಾದ್ಯಂತ ರಾಮಾಯಣ ಉತ್ಸವ ಆಯೋಜನೆ ಮಾಡುವ, ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್‌ ನಿರ್ಮಾಣ ಮಾಡುವ, ಪಾರದರ್ಶಕ ಉದ್ಯೋಗ ನೇಮಕಾತಿ ವ್ಯವಸ್ಥೆ ಜಾರಿಗೊಳಿಸುವ ಭರವಸೆ ಕೊಡಲಾಗಿದೆ. ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಆಟೋರಿಕ್ಷಾ, ಟ್ಯಾಕ್ಸಿ, ಲಾರಿ ಚಾಲಕರು ಹಾಗೂ ಇನ್ನಿತರೆ ಚಾಲಕರನ್ನು ಸಾಮಾಜಿಕ ಭದ್ರತಾ ಯೋಜನೆ ವ್ಯಾಪ್ತಿಗೆ ತರುವ ಆಶ್ವಾಸನೆ ನೀಡಲಾಗಿದೆ.

ಪ್ರಣಾಳಿಕೆಯಲ್ಲಿ ‘ಗ್ಯಾನ್‌’ (ಗರೀಬ್, ಯುವ, ಅನ್ನದಾತ ಹಾಗೂ ನಾರಿಶಕ್ತಿ)ಗೆ ಒತ್ತು ನೀಡಲಾಗಿದೆ. 15 ಲಕ್ಷ ಸಲಹೆಗಳನ್ನು ಸ್ವೀಕರಿಸಿ ರಾಜನಾಥ್ ಸಿಂಗ್‌ ನೇತೃತ್ವದ ಸಮಿತಿ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ.ಪ್ರಣಾಳಿಕೆಯಲ್ಲಿ ಏನೇನಿದೆ?

2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟ ಆಯೋಜನೆಗೆ ಪ್ರಯತ್ನ

ಉತ್ತರ, ದಕ್ಷಿಣ, ಪೂರ್ವ ಭಾರತಕ್ಕೆ ಪ್ರತ್ಯೇಕವಾದ ಬುಲೆಟ್‌ ರೈಲು ಮಾರ್ಗ

ರೈಲುಗಳಿಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಒದಗಿಸಲು ‘ಸೂಪರ್‌ ಆ್ಯಪ್‌’

ಹೊಸ ಬಗೆಯ ರೈಲುಗಳು, ವಿಶ್ವದರ್ಜೆಯ ನಿಲ್ದಾಣ, 2030ರೊಳಗೆ ವಂದೇ ಸ್ಲೀಪರ್‌ ರೈಲು

ಮುಂದಿನ 5 ವರ್ಷ ಉಚಿತ ಪಡಿತರ ವಿತರಣೆ. ಪ್ರಧಾನಿ ಆವಾಸ್‌ ಯೋಜನೆ ವಿಸ್ತರಣೆ

ಪ್ರಧಾನಮಂತ್ರಿ ಸೂರ್ಯ ಯೋಜನೆಯ ಮೂಲಕ ಮನೆಗಳಿಗೆ ಉಚಿತ ವಿದ್ಯುತ್‌

ಉಚಿತ ಗ್ಯಾಸ್‌ ಸಂಪರ್ಕದ ಉಜ್ವಲಾ ಯೋಜನೆ ವಿಸ್ತರಣೆ. ಬಡವರಿಗೆ 3 ಕೋಟಿ ಮನೆ

ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ ಸ್ಮರಣಾರ್ಥ ವಿಶ್ವಾದ್ಯಂತ ರಾಮಾಯಣ ಉತ್ಸವಗಳ ಆಯೋಜನೆ

ಭಾರತದಿಂದ ಕದ್ದೊಯ್ಯಲಾಗಿರುವ ಮೂರ್ತಿ ಹಾಗೂ ಕಲಾಕೃತಿಗಳು ದೇಶಕ್ಕೆ ವಾಪಸ್‌

ದೇಶಾದ್ಯಂತ 5 ಜಿ ನೆಟ್‌ವರ್ಕ್‌ ವಿಸ್ತರಣೆ, 6ಜಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ನೇತೃತ್ವ

ಭಾರತವನ್ನು ಜಾಗತಿಕ ಉತ್ಪಾದನಾ ವಲಯದ ಹಬ್‌ ಆಗಿಸುವ ಗುರಿ

ಬಾಹ್ಯಾಕಾಶಕ್ಕೆ ಮಾನವರ ರವಾನೆ ಹಾಗೂ ಭಾರತೀಯ ಅಂತರಿಕ್ಷ ನಿಲ್ದಾಣ ನಿರ್ಮಾಣ

ವಿಶ್ವಾದ್ಯಂತ ತಿರುವಳ್ಳುವರ್‌ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ

3 ಕೋಟಿ ಗ್ರಾಮೀಣ ಮಹಿಳೆಯರನ್ನು ಲಖ್‌ಪತಿ ದೀದಿ ಮಾಡಲು ಪಣ

ಅನೀಮಿಯಾ, ಸ್ತನ ಕ್ಯಾನ್ಸರ್‌, ಸರ್ವೈಕಲ್‌ ಕ್ಯಾನ್ಸರ್‌, ಸಂಧಿವಾತ ತಗ್ಗಿಸಲು ಆರೋಗ್ಯ ಸೇವೆಗಳ ವಿಸ್ತರಣೆ

ಪಾರದರ್ಶಕ ಸರ್ಕಾರಿ ನೇಮಕಾತಿ ವ್ಯವಸ್ಥೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಾನೂನು

ಕೃಷಿ ಚಟುವಟಿಕೆಗಳಿಗಾಗಿ ಭಾರತ್‌ ಕೃಷಿ ಎಂಬ ಉಪಗ್ರಹ ಉಡಾವಣೆ